ಜಿಲ್ಲೆ

ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್​ ಸೇವೆ ತಲುಪಿಸಿ...

ಉಡುಪಿ ಶಾಸಕ ಯಶಪಾಲ್​ ಸುವರ್ಣ ಸಲಹೆ

ಮಹಿಳಾ ಸಹಕಾರ ಸಂಘಗಳಿಗೆ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಹಕಾರ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು, ವಿಶ್ವಾಸ ಹಾಗೂ ನಂಬಿಕೆ ವೃದ್ಧಿಗಾಗಿ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ರಚಿಸಿದೆ. ಹೀಗಾಗಿ ಸಹಕಾರ ಸಂಘಗಳು ಜನರ ಮನೆ ಬಾಗಿಲಿಗೇ ಬ್ಯಾಂಕಿಂಗ್​ ಕ್ಷೇತ್ರದ ಸೇವೆ ತಲುಪುವಂತೆ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸಲಹೆ ನೀಡಿದರು.

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿದರು.

ಉಡುಪಿ ಕಡಿಯಾಳಿಯಲ್ಲಿರುವ ದಿ. ಓಷಿಯನ್​ ಪರ್ಲ್​ ಹೋಟೆಲ್​ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್​, ಸಹಕಾರ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ ಮಹಿಳಾ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರದಿಂದ ನಿರಂತರ ಫಲ

ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಹೂವು, ಹಣ್ಣಿನ ಬೀಜ ಬಿತ್ತಿದರೆ ತಾತ್ಕಾಲಿಕ ಫಲ ಸಿಗುತ್ತದೆ. ಆದರೆ, ಸಹಕಾರವೆಂಬ ಜ್ಞಾನದ ಬೀಜ ಬಿತ್ತಿದರೆ ಅದು ನಿರಂತರ ಫಲ ಕೊಡುತ್ತಲೇ ಇರುತ್ತದೆ. ಮಹಿಳೆಗೆ ಶಿಕ್ಷಣ, ಜ್ಞಾನ ನೀಡಿದರೆ ಅದು ಕುಟುಂಬಕ್ಕೆ ಪ್ರಯೋಜನಕಾರಿಯಾಗುತ್ತದೆ. ಹೂವು, ಬೆಳಕಿನ ರೀತಿಯಲ್ಲಿ ನಾವು ಅನ್ಯರ ಸೇವೆಗಾಗಿ ಬದುಕಬೇಕು ಎಂದರು.

ಮೂಡಬಿದಿರೆಯ ಸಹಕಾರ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್​ ಡಾ. ವಿಶೇಶ್ವರಯ್ಯ ಮಾತನಾಡಿದರು.

ಮೈಸೂರು ವಿವಿ ಜೆನೆಟಿಕ್ಸ್​ ಮತ್ತು ಜೇನೋಮಿಕ್ಸ್​ ವಿಭಾಗದ ಮುಖ್ಯಸ್ಥೆ ಪ್ರೊ. ಎಸ್​.ಎಸ್​. ಮಾಲಿನಿ, ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್​.ಸಿದ್ರಾಮಣ್ಣ, ಜಿಲ್ಲಾ ಸಹಕಾರ ಯೂನಿಯನ್​ ಉಪಾಧ್ಯಕ್ಷ ಅಶೋಕಕುಮಾರ್​ ಬಲ್ಲಾಳ್, ನಿರ್ದೇಶಕರಾದ ಅರುಣಕುಮಾರ್​ ಹೆಗ್ಡೆ, ಕರುಣಾಕರ ಶೆಟ್ಟಿ, ವೈ.ಸುಧೀರ್​ ಕುಮಾರ್​, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನೂಷಾ ಕೋಟ್ಯಾನ್​ ಉಪಸ್ಥಿತರಿದ್ದರು.
ಭಾನುಮತಿ ಎಚ್​.ಡಿ. ಮೂಡಿಗೆರೆ ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಂಡಳದ ಕಂಪ್ಯೂಟರ್​ ಪ್ರೋಗ್ರಾಮರ್​ ಸುಕನ್ಯಾ ಎಸ್​. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಯೂನಿಯನ್​ನ ನಿರ್ದೇಶಕ ಹರೀಶ್​ ಕಿಣಿ ಅಲೆವೂರು ಸ್ವಾಗತಿಸಿದರು. ಪಿ.ಯು. ಶ್ರೀಧರ್​ ಕಾರ್ಯಕ್ರಮ ನಿರೂಪಿಸಿದರು.

ಹೈನುಗಾರಿಕೆ, ಮೀನುಗಾರಿಕೆಗೆ ಸಬ್ಸಿಡಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರಿ ವ್ಯವಸ್ಥೆಯಲ್ಲಿ ದೇಶಕ್ಕೇ ಮಾದರಿಯಾಗಿದೆ. ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಹಕರಿಗೆ ಸಹಕಾರ ಕ್ಷೇತ್ರ ಸೇವೆ ನೀಡುತ್ತಿದೆ. ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಸಹಕಾರಿ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು. ಸಹಕಾರ ವ್ಯವಸ್ಥೆ ಮೂಲಕ ಹೈನುಗಾರಿಕೆ, ಮೀನುಗಾರಿಕೆಗೂ ಸಬ್ಸಿಡಿ ಜಾರಿಗೆ ತರಲಾಗುತ್ತಿದೆ ಎಂದು ಯಶ್​ಪಾಲ್​ ಸುವರ್ಣ ತಿಳಿಸಿದರು.