ನಂಜನಗೂಡು ತಾಲೂಕು ಕಚೇರಿ ಸಭಾಂಗಣದಲ್ಲಿ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. 
ಜಿಲ್ಲೆ

ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಿಗೆ ತರಬೇತಿ

ನಂಜನಗೂಡು: ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಿಗೆ ಬುಧವಾರ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ತರಬೇತಿ ಸಂಯೋಜಕ ಕೆ.ಸಿ.ವಾಸುದೇವಮೂರ್ತಿ ಮಾತನಾಡಿ, ಗ್ರಂಥಾಲಯಗಳನ್ನು ಸರ್ಕಾರ ಅರಿವು ಕೇಂದ್ರಗಳನ್ನಾಗಿ ಬದಲಾವಣೆ ಮಾಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಹದಿಮೂರು ಜನರನ್ನೊಳಗೊಂಡ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಅರಿವು ಕೇಂದ್ರಗಳು ಕೇವಲ ಪುಸ್ತಕ ಭಂಡಾರಗಳು ಅಲ್ಲದೆ ಪ್ರತಿಯೊಂದು ಗ್ರಾಮಕ್ಕೆ ಸಂಬಂಧಿಸಿದ ಇತಿಹಾಸ, ಆರೋಗ್ಯ, ಶಿಕ್ಷಣ, ಬೆಳೆಗಳ ವಿವರ, ದೇಸಿ ಆಟಗಳು, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುವ ಕೇಂದ್ರಗಳಾಗಬೇಕು. ಹಾಗಾದರೆ ಮಾತ್ರ ಕೇಂದ್ರಗಳು ಹಾಗೂ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಕಂಡು ಬರುತ್ತಿರುವ ಪ್ಲಾಸ್ಟಿಕ್ ದೊಡ್ಡ ಸಮಸ್ಯೆಯಾಗುತ್ತಿದೆ. ಅಲ್ಲದೆ ಸೇವಿಸುವ ಆಹಾರ ವಿಷಮಯವಾಗಿದೆ. ಜತೆಗೆ ಹಳೆಯ ಕಾಲದ ಆಟಗಳು ಮರೆಯಾಗುತ್ತಿವೆ. ಹೀಗೆ ಪ್ರತಿಯೊಂದು ವಿಷಯವನ್ನೂ ಕೇಂದ್ರೀಕರಿಸಿ ಮಕ್ಕಳು, ಹಿರಿಯರು, ರೈತರು, ಪತ್ರಕರ್ತರು ಸೇರಿದಂತೆ ಎಲ್ಲರನ್ನೂ ಒಳಗೊಂಡು ಸಮಿತಿ ರಚನೆ ಮಾಡಲಾಗಿದೆ. ಮೇಲ್ವಿಚಾರಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಅರಿವು ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ದೇವಿರಮ್ಮನಹಳ್ಳಿ ಜಿ.ಬಸವರಾಜು, ಕೋಣನೂರು, ಕುರಿಹುಂಡಿ, ಅಳಗಂಚಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅರಿವು ಕೇಂದ್ರದ ಮೇಲ್ವಿಚಾರಕರು ಹಾಗೂ ಸಲಹಾ ಸಮಿತಿ ಸದಸ್ಯರು ಇದ್ದರು.