ಜಿಲ್ಲೆ

ತರಬೇತಿಯಿಂದ ಉನ್ನತ ಸಾಧನೆ ಸಾಧ್ಯ

ದೀಪಕ ತಲವಾಯಿ

ಸವಣೂರ: ಉತ್ತಮ ಜೀವನ ನಿರ್ವಹಣೆಯೊಂದಿಗೆ ಉನ್ನತ ಸಾಧನೆಗೆ ವಿವಿಧ ಹಂತಗಳ ತರಬೇತಿ ಅವಶ್ಯವಾಗಿದೆ ಎಂದು ಜೆಸಿಐ ವಲಯಾಧಿಕಾರಿ ಬಸವರಾಜ ಚಳ್ಳಾಳ ತಿಳಿಸಿದರು.

ಪಟ್ಟಣದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜೆಸಿಐ ಭಾರತ ರಾಷ್ಟ್ರೀಯ ತರಬೇತಿ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಗೆ ಉತ್ತಮ ಮಾರ್ಗದರ್ಶನ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೆಸಿಐ ವತಿಯಿಂದ ವಿದ್ಯಾರ್ಥಿಗಳಿಗೆ, ಉದ್ಯಮಿಗಳು, ಯುವಕರು, ಮಹಿಳೆಯರು ಸೇರಿದಂತೆ ವಿವಿಧ ರಂಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಂತ ಹಂತವಾಗಿ ನಿರಂತರ ತರಬೇತಿ ಆಯೋಜಿಸುವ ಮೂಲಕ ಸದೃಢ ರಾಷ್ಟ್ರ ನಿರ್ವಣಕ್ಕೆ ಮುಂದಾಗುತ್ತಿದೆ ಎಂದರು.

ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಸಕ್ತಿಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಮಾತ್ರ ಉನ್ನತ ಸಾಧನೆಗೆ ಮುಂದಾಗಲು ಸಾಧ್ಯ. ಆದ್ದರಿಂದ, ಜೆಸಿಐ ಸೇರ್ಪಡೆ ಮೂಲಕ ಪದವಿ ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲು ಮುಂದಾಗಬೇಕು ಎಂದರು.

ಜೆಸಿಐ ತರಬೇತಿದಾರ ಜೆಸಿ ವಿದ್ಯಾಧರ ಕುತನಿ ಹಾಗೂ ಕಾಲೇಜ್ ಪ್ರಾಚಾರ್ಯ ಮಾಲತೇಶ ದಾನಪ್ಪನವರ ಸನ್ಮಾನ ಸ್ವೀಕರಿಸಿ, ತರಬೇತಿ ನೀಡಿ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಗೆ ಉತ್ತಮ ಮಾರ್ಗದರ್ಶನ ಕುರಿತು ಸುದೀರ್ಘ ವಿವರಣೆ ಕೈಗೊಂಡರು.

ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ಹರೀಶ ಹಿರಳ್ಳಿ, ಕೃಷ್ಣ ಭೋವಿ, ಮಹೇಶ ಆರೇರ, ಉಪನ್ಯಾಸಕರಾದ ಅರುಣಕುಮಾರ ಬರಡಿ, ಲಾವಣ್ಯ ಎಮ್ಮಿ, ಗೀತಾ ಕುಡಲ, ಸರಸ್ವತಿ ಮುಗಳಿ, ಇತರರು ಪಾಲ್ಗೊಂಡಿದ್ದರು.