ಕಾರವಾರ:- ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಜಿಲ್ಲೆಯ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನಿರ್ಭಂದವಿಲ್ಲದೇ ಕಾರ್ಯ ನಿರ್ವಹಿಸುವ ಮೂಲಕ ಸಿಕ್ಕಂತಹ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಂಪನ್ಮೂಲಗಳ ಕೇಂದ್ರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಿವಿಲ್, ಅರಣ್ಯ, ಕೃಷಿ, ತೋಟಗಾರಿಕೆ ತಾಂತ್ರಿಕ ಸಹಾಯಕ, ಐಇಸಿ, ಆಡಳಿತ ಸಹಾಯಕ ಹುದ್ದೆಗೆ ಹೊಸದಾಗಿ ಆಯ್ಕೆಗೊಂಡಿರುವಂತಹ ಅಭ್ಯರ್ಥಿಗಳಿಗಾಗಿ ಜಿಲ್ಲಾ ಪಂಚಾಯಿತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಒಂದು ದಿನದ ಬುನಾದಿ ತರಬೇತಿಯನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ಪರಿಸರ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದು
ಗ್ರಾಮೀಣ ಜನರ ವಲಸೆ ತಪ್ಪಿಸಿ ಸ್ವ ಗ್ರಾಮದಲ್ಲೇ ಕೆಲಸ ನೀಡುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿದೆ.
ಹೀಗಾಗಿ ವಿವಿಧ ಹುದ್ದೆಗಳಿಗೆ ಹೊಸದಾಗಿ ಆಯ್ಕೆಗೊಂಡಿರುವಂತಹ ಅಭ್ಯರ್ಥಿಗಳು ಯೋಜನೆಯ ಬಗ್ಗೆ ಸಮಗ್ರವಾಗಿ ಅರ್ಥೈಸಿಕೊಳ್ಳಬೇಕು.
ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅನುಕೂಲ ಆಗುವಂತಹ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು.
ಜೊತೆಗೆ ನರೇಗಾ ಯೋಜನೆಯ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವವರ ಪ್ರಮಾಣ ಕಡಿಮೆಯಿರುವ ಪ್ರದೇಶದಲ್ಲಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಬೇಕು.
ಯಾವುದೇ ಬೇಧ-ಭಾವ ಇಲ್ಲದೇ ಎಲ್ಲರೂ ಸೇರಿಕೊಂಡು ಒಂದು ತಂಡವಾಗಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಯೋಜನಾ ನಿರ್ದೇಶಕರು(ಡಿಆರ್‌ಡಿಎ) ಕರೀಂ ಅಸಾದಿ ಅವರು ಮಾತನಾಡಿ, ನೀವು ಯಾವುದೇ ಕಾಮಗಾರಿಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರು ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಾವಳಿಗನುಗುಣವಾಗಿ ಪರಿಪೂರ್ಣತೆಯಿಂದ ಕೆಲಸ ನಿರ್ವಹಿಸಬೇಕು.
ಕೃಷಿ, ತೋಟಗಾರಿಕೆ, ಅರಣ್ಯ ಸೇರಿದಂತೆ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯಡಿ ಅನುಷ್ಠಾನಗೊಳಿಸುವ ಕಾಮಗಾರಿಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಐಇಸಿ ಚಟುವಟಿಕೆಗಳನ್ನು ಒಳಗೊಂಡಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಅವರು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳು ಹಾಗೂ ಅವುಗಳ ಕಾರ್ಯವೈಖರಿ ಬಗ್ಗೆ ತರಬೇತಿ ನೀಡಿದರು.
ನಂತರ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಎ.ಎಸ್ ಅವರು ಉದ್ಯೊಗ ಖಾತ್ರಿ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಹಾಗೂ ತಾಂತ್ರಿಕ ಸಂಯೋಜಕರಾದ ಮಹೇಶ್ ಪಟಗಾರ್, ಅನೀಲ್ ಗಾಯತ್ರಿ ಯೋಜನೆಯ ರೂಪುರೇಷೆಗಳು, ಅಂದಾಜು ಪತ್ರಿಕೆ ತಯಾರಿ, ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸಿದರು.
ಸಾಮಾಜಿಕ ಲೆಕ್ಕ ಪರಿಶೋಧನೆ ಅಂಶದ ಕುರಿತು ನಾಗರಾಜ್ ಹಬ್ಬು ಮಾಹಿತಿ ನೀಡಿದರೆ, ಜಿಲ್ಲಾಪಂಚಾಯಿತಿ ಎಡಿಪಿಸಿ ಅವರು ತಾಂತ್ರಿಕ ಸಹಾಯಕರ ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಶಾಖೆಯ ಉಪಕಾರ್ಯದರ್ಶಿ ಡಿ.ಎಂ ಜಕ್ಕಪ್ಪಗೋಳ, ನರೇಗಾ ವಿಭಾಗದ ಲೆಕ್ಕ ವ್ಯವಸ್ಥಾಪಕರಾದ ವಿಘ್ನೇಶ, ಜಿಲ್ಲಾ ಐಇಸಿ ಸಂಯೋಜಕರಾದ ಪಕ್ಕಿರಪ್ಪ ತುಮ್ಮಣ್ಣನವರ, ತಾಲೂಕಾ ಎಎಂಐಎಸ್ ಸಂಯೋಜಕರಾದ ವಿನುತಾ ನಾಯ್ಕ್, ತಾಲೂಕಾ ಐಇಸಿ ಸಂಯೋಜಕರಾದ ಪೂರ್ಣಿಮಾ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.