ವಿಜಯವಾಣಿ ಸುದ್ದಿಜಾಲ ಉಡುಪಿ
ಮನೆಯಲ್ಲಿರುವ ಹಿರಿಯ ಜೀವಗಳನ್ನು, ತಂದೆ&ತಾಯಿಯನ್ನು ಕೈಲಾಗದವರೆಂದು, ನಿರುಪಯುಕ್ತರೆಂದು ಪರಿಗಣಿಸುವ ಮನೋಭಾವದಿಂದ ಮಕ್ಕಳು ಹೊರಬರಬೇಕು. ಮನೆಯೊಳಗೆ ಅವರೊಂದಿಗೆ ಅಗೌರವವಾಗಿ ನಡೆದುಕೊಳ್ಳುವುದು, ಹೆತ್ತವರನ್ನು ಮನೆಯಿಂದ ಹೊರಹಾಕುವುದು, ಆಸ್ತಿ ಕಬಳಿಸಲು ಸಂಚು ಮಾಡುವುದು ಅಥವಾ ಅವರಿಗೆ ಅಸಹಾಯಕ ಸ್ಥಿತಿ ಉಂಟುಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವಿಭಾಗೀಯ ಉಪ ನಿರ್ದೇಶಕಿ ಡಾ. ಮಲ್ಲಿಕಾ ಮಾತನಾಡಿ, ವೈಜ್ಞಾನಿಕ ತಂತ್ರಜ್ಞಾನದಿಂದ ಜನರ ಜೀವಿತಾವಧಿ ಹೆಚ್ಚಳವಾಗುತ್ತಿದೆ. ಹೀಗಾಗಿ ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚುತ್ತಲಿದೆ. ಅವರ ಆರೋಗ್ಯ ಕಾಳಜಿ ಅತ್ಯಗತ್ಯವಾಗಿದ್ದು, ಮನೆಗಳಿಗೆ ಸಮೀಕ್ಷೆಗೆಂದು ಹೋಗುವ ಆಶಾ ಕಾರ್ಯಕರ್ತೆಯರು ಅವರ ಆರೋಗ್ಯವನ್ನೂ ವಿಚಾರಿಸಿಬರಬೇಕು. ಸೂಕ್ತ ಚಿಕಿತ್ಸೆಯ ಅಗತ್ಯತೆಯಿದ್ದಲ್ಲಿ ಅವಕಾಶ ಮಾಡಿಕೊಡಬೇಕು ಎಂದರು.
ಜಿಪಂ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ಜಿಲ್ಲಾ ಹಿರಿಯ ನಾಗರಿಕರ ಉಪಶಮನ ಆರೈಕೆಯ ನೋಡಲ್ ಅಧಿಕಾರಿ ಡಾ. ನಾಗರತ್ನಾ ಶಾಸ್ತ್ರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ನೋಡಲ್ ಅಧಿಕಾರಿ ಡಾ. ಲತಾ ನಾಯಕ್, ರಾಜಸ್ಥಾನ ಮೌಂಟ್ ಅಬು ಗ್ಲೋಬಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮಹೇಶ್ ಹೇಮಾದ್ರಿ, ಡಾ. ರೀಟಾ, ಬ್ರಹ್ಮಕುಮಾರಿ ಈಶ್ವರೀಯ ವಿವಿ ಉಡುಪಿ ಶಾಖೆಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸುಮಾ ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರಿಗೆ ಬೆಂಗಳೂರಿನ ಇ-ಹೆಲ್ತ್ನ ಉಪನಿರ್ದೇಶಕ ಡಾ. ವಸಂತಕುಮಾರ್ ತರಬೇತಿ ನೀಡಿದರು. ಬಿ.ಕೆ. ರಘುರಾಮ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಮುಂದಿನ 3 ತಿಂಗಳ ಬಳಿಕ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಕ್ರಮದಲ್ಲಿಯೇ ಆಶಾ ಕಾರ್ಯಕರ್ತೆಯರು ತಮ್ಮ ಮೊಬೈಲ್ನ ಟಾರ್ಚ್ಗಳನ್ನು ಏಕಕಾಲದಲ್ಲಿ ಪ್ರಜ್ವಲಿಸುವ ಮೂಲಕ ಗೌರವ ಸಲ್ಲಿಸಿದರು.