ಕುಶಾಲನಗರ:
ವೃತ್ತಿ ಯೋಜನೆಯ ಶಿಕ್ಷಕರಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಮತ್ತು ಅನಾಹತ ಯುನೈಟೆಡ್ ಎಫರ್ಟ್ ಫೌಂಡೇಶನ್ ಸಹಯೋಗದಲ್ಲಿ ಕುಶಾಲನಗರ ತಾಲೂಕು ಕೂಡಿಗೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎರಡು ದಿನದ ತರಬೇತಿ ಏರ್ಪಡಿಸಲಾಗಿತ್ತು.
ಬುಧವಾರ ನಡೆದ ಕಾರ್ಯಕ್ರಮದಲ್ಲಿ ತರಬೇತಿಗೆ ಚಾಲನೆ ನೀಡಿದ ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಭಾರತಿ ಮಾತನಾಡಿ,
ವೃತ್ತಿ ಯೋಜನೆ ಕಾರ್ಯಕ್ರಮ ಹಿಂದಿನ ವರ್ಷದಿಂದಲೂ ನಡೆಯುತ್ತಿದ್ದು, ಇದರ ಉಪಯೋಗ ಮಕ್ಕಳಿಗೆ ತಲುಪುತಿದೆ. 8,9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ವಲಯಗಳು “ವಿದ್ಯಾರ್ಥಿಗಳನ್ನ ವೃತ್ತಿಯೆಡೆಗೆ (ಸ್ಟೂಡೆಂಟ್ಸ್ ಟು ಪ್ರೋಫೇಶನಲ್) ಎಂಬ ಅಂಶವನ್ನು ಆಧರಿಸಿ ವಿದ್ಯಾರ್ಥಿಗಳಲ್ಲಿ ಕೆಲಸದ ಆಸಕ್ತಿಗಳನ್ನು ಗುರುತಿಸುವುದು, ವೃತ್ತಿ ಆಯ್ಕೆಗಳನ್ನು ತಿಳಿದುಕೊಳ್ಳುವುದು ಅದಕ್ಕೆ ಸಂಬAದಿಸಿದ ಶೈಕ್ಷಣಿಕ ಆಯ್ಕೆಗಳನ್ನು ಅಧ್ಯಯನ ಮಾಡುವಂತೆ ಹಾಗೂ ವೃತ್ತಿ ಯೋಜನೆಯನ್ನು ವಿದ್ಯಾರ್ಥಿಗಳು ತಾವೇ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ ಮಕ್ಕಳಿಗೆ ತಮ್ಮ ಪ್ರೌಢಶಾಲಾ ಹಂತದಲ್ಲೇ ಆಸಕ್ತಿಗನುಗುಣವಾಗಿ ಗುರಿಯನ್ನು ನಿರ್ಧರಿಸಲು ಹಾಗೂ ಆ ಗುರಿಯ ಹಾದಿಯಲ್ಲಿ ಮುನ್ನಡೆಸಲು ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮ ಜೀವನ ಕಟ್ಟಿಕೊಳ್ಳುವೆಡೆಗೆ ಅವರನ್ನು ತರಬೇತಿಗೊಳಿಸಿದರೆ ಅವರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ ಎಂದರು.
ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ತರಬೇತುದಾರ ಎಸ್. ಸಿದ್ದೇಶ್ ಮಾತನಾಡಿ ಎಲ್ಲಾ ವಸತಿ ಶಾಲೆಯಲ್ಲಿನ ಮಕ್ಕಳು ವೃತ್ತಿ ವಲಯಗಳು ಹಾಗೂ ಮತ್ತು ವೃತ್ತಿ ಯೋಜನೆ ಬಗ್ಗೆ ಈವಾಗಿನಿಂದಲೇ ಯೋಜಿಸುವುದು ಬಹಳ ಮುಖ್ಯ. 2030ರ ವರ್ಷಕ್ಕೆ ಎರಡು ಕೋಟಿ ವಿದ್ಯಾರ್ಥಿಗಳಿಗೆ ಈ ಮಾಹಿತಿ ತಲುಪಬೇಕೆಂಬುದು ಸಂಸ್ಥೆಯ ಉದ್ದೇಶವಾಗಿದೆ. ವೃತ್ತಿ ಯೋಜನೆಯನ್ನು ವಿದ್ಯಾರ್ಥಿಗಳು ತಾವೇ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ಮುಖ್ಯಸ್ಥ ಡಿ.ಕೆ. ಪ್ರಸನ್ನ ಕುಮಾರ್ ಮಾತನಾಡಿ ಉದ್ಯೋಗ ಹಾಗೂ ಅದಕ್ಕೆ ಬೇಕಾದ ಕೌಶಲ್ಯಗಳ ನಡುವೆ ಉಂಟಾದ ಬಿರುಕನ್ನು ಹೋಗಲಾಡಿಸಲು ಹಾಗೂ ವಿದ್ಯಾರ್ಥಿಗಳು ಯೋಜಿತ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಕೆಲಸದಲ್ಲಿ ತೃಪ್ತಿ ಮತ್ತು ಸಂತೋಷವನ್ನು ಪಡುವುದರ ಜತೆಗೆ ದೇಶದ ಆರ್ಥಿಕತೆಗೆ ಕೊಡುಗೆ ಸಲ್ಲಿಸಲು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅನಾಹತ ಯುನೈಟೆಡ್ ಸಂಸ್ಥೆಯ ತರಬೇತುದಾರರಾದ ವಿ.ಎಸ್. ರಾಘವೇಂದ್ರ, ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ಕೆ.ವಿ. ಅಮೃತ, ದಿನೇಶ್ ಆಚಾರ್ ಮತ್ತಿತರರು ಇದ್ದರು.
ಕೊಡಗು ಜಿಲ್ಲೆಯ 7 ವಸತಿ ಶಾಲೆಗಳಿಂದ 14 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವೃತ್ತಿ ಯೋಜನಾ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.