ಜಿಲ್ಲೆ

ಮಹಿಳಾ ಸಬಲೀಕರಣಕ್ಕೆ ತರಬೇತಿ ಅಗತ್ಯ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಆರ್ಥಿಕವಾಗಿ ಸಬಲರಾಗಲು ಸ್ವ ಉದ್ಯೋಗಾಧಾರಿತ ತರಬೇತಿಗಳು ಅಗತ್ಯವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿಠ್ಠಲ್ ಕಾವಳೆ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಎನ್‌ಆರ್‌ಎಲ್‌ಎಂ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ 13 ದಿನಗಳ ಉತ್ಪನ್ನಗಳ ತಯಾರಿಕಾ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜೂಟ್ ಉತ್ಪನ್ನಗಳು ಬಹುಬೇಡಿಕೆ ಹೊಂದಿದ್ದು, ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಇದು ಕೈಜೋಡಿಸಲಿದೆ. ಜತೆಗೆ ಇದು ಪರಿಸರಸ್ನೇಹಿಯಾಗಿದ್ದು, ದಿನನಿತ್ಯದ ಬಳಕೆಗೆ ವಿವಿಧ ಮಾದರಿಗಳ ಉತ್ಪನ್ನಗಳನ್ನು ಬಳಸಬಹುದಾಗಿದೆ ಎಂದು ತಿಳಿಸಿದರು. ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಆಧಾರಿತ ತರಬೇತಿಗಳು ಸಹಕಾರ ನೀಡುತ್ತವೆ ಇಂತಹ ತರಬೇತಿಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಆದಾಯ ಕಾಣಬಹುದು:

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಎನ್‌ಆರ್‌ಎಲ್‌ಎಂ ವಿಭಾಗದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳಾ ಮಾತನಾಡಿ, ತರಬೇತಿ ಪೂರ್ಣಗೊಳಿಸಿರುವ ಎಲ್ಲಾ ಮಹಿಳೆಯರು ತಮ್ಮ ಮನೆಗಳಲ್ಲಿ ವೈಯಕ್ತಿಕವಾಗಿ ಅಥವಾ ಗುಂಪು ಚಟುವಟಿಕೆಗಳ ಮೂಲಕ ಜೂಟ್ ಆಧಾರಿತ ಉತ್ಪನ್ನ ತಯಾರಿಸಿ, ಆದಾಯ ಹೊಂದಬಹುದು ಎಂದರು. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆಯುವ ಮಾಸಿಕ ಸಂತೆಗಳು, ವ್ಯಾಪಾರ ಮೇಳಗಳಲ್ಲಿ ಜೂಟ್ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

ಮಹಿಳೆಯಲ್ಲಿ ಅನನ್ಯ ಶಕ್ತಿ ಇದೆ:

ರುಡ್‌ಸೆಟ್ ಸಂಸ್ಥೆ ನಿರ್ದೇಶಕ ರವಿಕುಮಾರ ಮಾತನಾಡಿ, ಸಂಸ್ಥೆಯಲ್ಲಿ ತರಬೇತಿ ಪಡೆಯುವುದು ಮಾತ್ರವಲ್ಲದೇ, ಬ್ಯಾಂಕ್‌ನಲ್ಲಿ ಸಾಲ ಪಡೆದು, ಸ್ವ ಉದ್ಯೋಗ ಆರಂಭಿಸುವ ಮೂಲಕ ಸ್ವಾವಲಂಬಿಗಳಾಗಬೇಕು ಹಾಗೂ ತರಬೇತಿ ಮೂಲಕ ಪಡೆದ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಕೆಲಸಗಳನ್ನು ಒಟ್ಟಿಗೆ ನಿಭಾಯಿಸುವ ಅನನ್ಯ ಶಕ್ತಿ ಕೇವಲ ಮಹಿಳೆಯರಿಗೆ ಮಾತ್ರ ಇರುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿಠ್ಠಲ್ ಕಾವಳೆ ಸಾಂಕೇತಿಕವಾಗಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.