ಜಿಲ್ಲೆ

ಮೆಸ್ಕಾಂನಲ್ಲಿ ಸ್ಥಳೀಯರಿಗೆ ಉದ್ಯೋಗ - ಶಾಸಕ ಅಶೋಕ್ ರೈ ಪ್ರತಿಪಾದನೆ - ಕಂಬ ಹತ್ತುವ ತರಬೇತಿ

Mangaluru - Nishantha Narayana

ಪುತ್ತೂರು: ಉದ್ಯೋಗವಿಲ್ಲದೆ ಇರುವ ಯುವಕರಿಗೆ ಕೆಲಸ ನೀಡಬೇಕೆಂಬುದು ಕನಸಾಗಿತ್ತು. ಹಿಂದೆ ಕೆಎಸ್‌ಆರ್‌ಟಿಸಿಯಲ್ಲಿ ೩೫೦ರಿಂದ ೪೦೦ ಮಂದಿಗೆ ತರಬೇತಿ ನೀಡಿ ಕೆಲಸ ನೀಡಲಾಗಿತ್ತು. ಮೆಸ್ಕಾಂನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ನಿಟ್ಟಿನಲ್ಲಿ ಇಂಧನ ಸಚಿವರಲ್ಲಿ ಮಾತುಕತೆ ನಡೆಸಿ ಸ್ಥಳೀಯ ೪೦೦ ಮಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕೊಂಬೆಟ್ಟು ಜೂನಿಯರ್ ಕಾಲೇಜು ಮೈದಾನದಲ್ಲಿ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮೆಸ್ಕಾಂ ಮೂಲಕ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ವಿದ್ಯುತ್ ಕಂಬ ಹತ್ತುವ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.

ಮಂಗಳೂರು ವಿದ್ಯುತ್ ಪ್ರಸರಣ ನಿಗಮದಲ್ಲಿ ೪೫೦ ಮಂದಿ ಲೈನ್‌ಮನ್‌ಗಳ ಬೇಡಿಕೆಯಿದ್ದು, ಮೊದಲ ಬಾರಿಗೆ ಸ್ಥಳೀಯರಿಗೆ ತರಬೇತಿ ನೀಡಲಾಗುತ್ತಿದೆ. ಶಾಟ್‌ಪುಟ್, ೧೦೦ ಮೀ, ೮೦೦ ಮೀ ಓಟ, ಸ್ಕಿಪ್ಪಿಂಗ್ ಕಾಲಮಿತಿಯಲ್ಲಿ ಅಭ್ಯರ್ಥಿ ಮುಗಿಸಬೇಕಾದ ಕಾರಣ ಅದಕ್ಕೂ ಬೇಕಾದ ತರಬೇತಿಯನ್ನು ನೀಡಲಾಗುವುದು. ಮೆಸ್ಕಾಂ, ಪೊಲೀಸ್, ಕೆಎಸ್‌ಆರ್‌ಟಿಸಿ ಸೇರಿ ವಿವಿಧ ಸರ್ಕಾರಿ ಉದ್ಯೋಗಗಳು ನಮ್ಮ ಭಾಗದ ಯುವಕರಿಗೆ ಸಿಗಬೇಕೆಂಬ ಪ್ರಯತ್ನಕ್ಕೆ ಕೈ ಹಾಕಲಾಗಿದೆ ಎಂದು ತಿಳಿಸಿದರು.

ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಆರ್. ಶೆಟ್ಟಿ, ಟ್ರಸ್ಟಿ ನಿಹಾಲ್ ಶೆಟ್ಟಿ ಬೀಜಂದಾಡಿಗುತ್ತು, ಅಕ್ರಮ-ಸಕ್ರಮ ಸಮಿತಿ ರಾಮಣ್ಣ ಪಿಲಿಂಜ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಮುರಳೀಧರ ರೈ ಮಠಂದೂರು, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ, ಮುಖ್ಯ ಇಂಜಿನಿಯರ್ ರವಿಕಾಂತ ಕಾಮತ್, ಅಽಕ್ಷಕ ಇಂಜಿನಿಯರ್ ಕೃಷ್ಣರಾಜ್, ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ಮತ್ತಿತರರು ಉಪಸ್ಥಿತರಿದ್ದರು.