ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದದಲ್ಲಿ ಗುರುವಾರ ಕೆಲಕಾಲ ರೈಲು ಸಂಚಾರ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆ ಉಂಟಾದ ಕಾರಣ ಬೆಳಗ್ಗೆ 9.58 ಕ್ಕೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಸಮಸ್ಯೆ ಕಂಡುಬಂದ ನಂತರ ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್‌ಗೆ ಕೊಂಡೊಯ್ಯಲಾಯಿತು. ಕೆಲ ಕಾಲ ರೈಲು ಓಡಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಗಲಿಬಿಲಿಗೊಂಡರು.
ಸಾಮಾನ್ಯವಾಗಿ ಮೆಜೆಸ್ಟಿಕ್ ನಿಂದ ನೇರಳೆ ಬಣ್ಣದ ನಿಲ್ದಾಣಗಳಲ್ಲಿ ಹೆಚ್ಚು ಜನದಟ್ಟಣೆ ಇರುತ್ತದೆ. ಕಾಲೇಜು, ಕಚೇರಿ ಹಾಗೂ ಇನ್ನಿತರ ಕೆಲಸಕ್ಕಾಗಿ ಓಡಾಡುವ ಜನರಿಂದ ಮೆಟ್ರೊ ಗಿಜಿಗಿಡುತ್ತಿರುತ್ತದೆ. ಪ್ರತೀ ಮೂರರಿಂದ ನಾಲ್ಕು ನಿಮಿಷಕ್ಕೊಮ್ಮೆ ಓಡಾಡುವ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಜನ ಗೊಂದಲಕ್ಕೀಡಾದರು. ಒಂದೂವರೆ ಗಂಟೆ ಬಳಿಕ 11.30ರ ಸುಮಾರಿಗೆ ಮೆಟ್ರೋ ಸಂಚಾರ ಸಹಜ ಸ್ಥಿತಿಗೆ ಮರಳಿತು.
ಭಾನುವಾರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (ಯುಪಿಎಸ್‌ಸಿ) ನಡೆಯಲಿರುವುದರಿಂದ, ನಮ್ಮ ಮೆಟ್ರೊ ಸೇವೆಯನ್ನು ಬೆಳಗ್ಗೆ 6 ಗಂಟೆಗೆ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಜೂ. 16ರಂದು ಟರ್ಮಿನಲ್ ನಿಲ್ದಾಣಗಳಾದ ವೈಟ್‌ಪೀಲ್ಡ್, ಚಲ್ಲಘಟ್ಟ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳಿಂದ ಮೆಟ್ರೊ ರೈಲು ಸೇವೆ ಬೆಳಗ್ಗ್ಗೆ 7 ಗಂಟೆಗೆ ಬದಲಾಗಿ 6 ಗಂಟೆಗೆ ಪ್ರಾರಂಭವಾಗಲಿದೆ.
ಎಲೆಕ್ಟ್ರಾನಿಕ್ಸೃ್ ಸಿಟಿಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ (ಆರ್‌ವಿ ರಸ್ತೆ - ಬೊಮ್ಮಸಂದ್ರ) ಗುರುವಾರ ಪರೀಕ್ಷಾರ್ಥ ಪ್ರಾಯೋಗಿಕ ಚಾಲನೆ ಆರಂಭಿಸಲಾಗಿದೆ.
ಜೂ. 7ರಂದು ಆಂಭವಾಗಬೇಕಿದ್ದ ಪ್ರಾಯೋಗಿಕ ಸಂಚಾರ ತಾಂತ್ರಿಕ ಕಾರಣಕ್ಕಾಗಿ ಜೂ.13ಕ್ಕೆ ಆರಂಭವಾಗಿದೆ.