ಹುಬ್ಬಳ್ಳಿ: ರಾಜಧಾನಿ ಬೆಂಗಳೂರಿಗೆ ವೇಗದ ಸಂಪರ್ಕ ಕಲ್ಪಿಸುವ ರಾಜ್ಯದ ಮೊದಲ ವಂದೇ ಭಾರತ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಧಾರವಾಡದಿಂದ ಬೆಳಗ್ಗೆ 5.45ಕ್ಕೆ ಹೊರಡುವ ವ್ಯವಸ್ಥೆ ಮಾಡಬೇಕೆಂದು ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಟ್ರಸ್ಟಿ ಬಾಳು ಮಗಜಿಕೊಂಡಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜೂ. 27ರಿಂದ ವಂದೇ ಭಾರತ ರೈಲು ಆರಂಭಿಸುತ್ತಿದೆ. ಇದು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಆದರೆ, ಬೆಂಗಳೂರಿನಿಂದ ಬೆಳಗ್ಗೆ ಹೆಚ್ಚಿನ ಜನ ಇಲ್ಲಿಗೆ ಬರುವುದಿಲ್ಲ. ಉತ್ತರ ಕರ್ನಾಟಕದ ಕೇಂದ್ರ ಬಿಂದುವಾಗಿರುವ ಹುಬ್ಬಳ್ಳಿಯಿಂದ ಬೆಳಗ್ಗೆ ಅಧಿಕ ಸಂಖ್ಯೆಯಲ್ಲಿ ರಾಜಧಾನಿಗೆ ಹೋಗುತ್ತಾರೆ. ಹಾಗಾಗಿ, ಬೆಳಗ್ಗೆ ವಂದೇ ಭಾರತ ರೈಲು ಇಲ್ಲಿಂದ ಹೊರಡಲಿ ಎಂದರು.
ಈ ಭಾಗದ ಜನರು, ವ್ಯಾಪಾರಸ್ಥರು, ವೈದ್ಯರು, ವಕೀಲರು ಸೇರಿ ಬೆಂಗಳೂರಿನಲ್ಲಿ ಏನಾದರೂ ಕೆಲಸ ಇದ್ದವರು ಬೆಳಗ್ಗೆ ಹೊರಟು, ಮಧ್ಯಾಹ್ನದ ಹೊತ್ತಿಗೆ ಮುಗಿಸಿ ರಾತ್ರಿ ವಾಪಸ್ ಬರುವ ವ್ಯವಸ್ಥೆಯಾಗಬೇಕು. ಹಾಗಾಗಿ, ವಂದೇ ಭಾರತ ರೈಲಿನ ವೇಳಾಪಟ್ಟಿ ಬದಲಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಧಾರವಾಡದಿಂದ ಬೆಳಗ್ಗೆ ಇಂಟರ್ಸಿಟಿ ರೈಲು ಇದ್ದರೂ ಅದಕ್ಕೆ ಎಲ್ಲ ಕಡೆ ನಿಲುಗಡೆ ಕಲ್ಪಿಸಲಾಗಿದೆ. ಇದರಿಂದ ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ. ವಂದೇ ಭಾರತ ರೈಲಿಗೆ ನಿಲುಗಡೆ ಕಡಿಮೆ ಇವೆ. ನೇರ ಸಂಪರ್ಕ ಇರುವುದರಿಂದ ಬೆಳಗ್ಗೆ ಬೇಗ ರಾಜಧಾನಿ ತಲುಪಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಪರಿಶೀಲಿಸಬೇಕು ಎಂದು ಆಕಿರ್ಟೆಕ್ಟ್, ಇಂಜಿನಿಯರ್ ರಾಜು ಹಿರೇಮಠ ಮನವಿ ಮಾಡಿದರು.
ವೇಳಾಪಟ್ಟಿ ಬದಲಿಸುವ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಭಾಗದ ಜನರ ಅನುಕೂಲಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಫಿಲ್ಮ ಡಿಸ್ಟ್ರಿಬ್ಯೂಟರ್ ಬಾಬು ಶಲವಡಿ, ವಸಂತ ಪಾಲನಕರ, ಅಮಿತ ಬೀಳಗಿ, ಚಂದ್ರು ಮರಿಬಸಯ್ಯನವರ ಕೋರಿದರು.