ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕ್ಯಾಸಲ್‌ರಾಕ್ ಸಮೀಪ ಭೂ ಕುಸಿತ ಉಂಟಾಗಿ ರೈಲ್ವೆ ಹಳಿ ಮೇಲೆ ಮಣ್ಣು, ಕಲ್ಲು, ಮರಗಳು ಬಿದ್ದಿರುವುದು. 
ಜಿಲ್ಲೆ

ಕ್ಯಾಸಲ್‌ರಾಕ್ ಬಳಿ ಗುಡ್ಡ ಕುಸಿದು ರೈಲುಗಳ ಸಂಚಾರ ವ್ಯತ್ಯಯ

ರವಿ ಎಸ್. ಬಳೂಟಗಿ

ಹುಬ್ಬಳ್ಳಿ: ಸತತ ಮಳೆಯಿಂದಾಗಿ ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿಯ ಕ್ಯಾಸಲ್‌ರಾಕ್ ಸಮೀಪದ ಬ್ರಗಾಂಜಾ ಘಾಟ್‌ನ ಕೇದಾರನಾಥ ರಾಕ್ ಮತ್ತು ಕಾರಂಜೋಲ್ ನಿಲ್ದಾಣಗಳ ಮಧ್ಯೆ ಮಂಗಳವಾರ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಈ ಮಾರ್ಗದ ವಾಸ್ಕೊ- ಯಶವಂತಪುರ ರೈಲು ಸಂಚಾರವನ್ನು ಮಂಗಳವಾರ ಸಂಪೂರ್ಣ ರದ್ದುಗೊಳಿಸಲಾಯಿತು. ಯಶವಂತಪುರ- ವಾಸ್ಕೊ ರೈಲು ಹುಬ್ಬಳ್ಳಿ ನಿಲ್ದಾಣದವರೆಗೆ ಹಾಗೂ ಹಜರತ್ ನಿಜಾಮುದ್ದೀನ್- ವಾಸ್ಕೊ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ನಿಲ್ದಾಣ ದವರೆಗೆ ಸಂಚರಿಸಿದವು. ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಯಿತು. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಣ್ಣು, ಕಲ್ಲು, ಮರಗಳನ್ನು ತೆರವುಗೊಳಿಸಿ ಹಳಿ ದುರಸ್ತಿ ಕಾರ್ಯಕೈಗೊಂಡರು.