ಖಾನಾಪುರ: ಚಲಿಸುತ್ತಿದ್ದ ಸರಕು ಸಾಗಣೆ ರೈಲು ಅಪ್ಪಳಿಸಿ ಕಾಡೆಮ್ಮೆ ಮೃತಪಟ್ಟ ಘಟನೆ ತಾಲೂಕಿನ ಶಿವಠಾಣ ಗ್ರಾಮದ ಬಳಿ ಲೋಂಡಾ-ಶಿವಠಾಣ ರೈಲು ಮಾರ್ಗದಲ್ಲಿ ಶನಿವಾರ ಸಂಭವಿಸಿದೆ. ರೈಲು ಹಳಿ ಮೇಲೆ ಆಹಾರ ಅರಸುತ್ತಿದ್ದ ಕಾಡೆಮ್ಮೆ ಮೇಲೆ ರಭಸವಾಗಿ ರೈಲು ನುಗ್ಗಿದ್ದರಿಂದ ಕಾಡೆಮ್ಮೆಗೆ ಗರ್ಭಪಾತವಾಗಿದ್ದು, ಕಾಡೆಮ್ಮೆಯ ಗರ್ಭದಿಂದ ಹೊರಬಿದ್ದ ಗಂಡು ಕರು ಕೂಡ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಪಶು ವೈದ್ಯರು ಭೇಟಿ ನೀಡಿದ್ದು, ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮನೋಹರ ದಾದ್ಮಿ ನೇತೃತ್ವದಲ್ಲಿ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಲೋಂಡಾ ಅರಣ್ಯದಲ್ಲಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ಕೈಗೊಂಡಿದ್ದಾರೆ. ಲೋಂಡಾ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರೈಲು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸಿಎಫ್ ಶಶಿಧರ ಮಾಹಿತಿ ನೀಡಿದ್ದಾರೆ.