ಕೊಪ್ಪಳ: ಅಜ್ಜನ ಜಾತ್ರೆ ಪ್ರತಿ ವರ್ಷ ವಿಭಿನ್ನವಾಗಿ ನಡೆಯುತ್ತ ಬಂದಿದ್ದು, ಈ ಬಾರಿ ಆಧುನಿಕತೆಯ ಸ್ಪರ್ಶ ನೀಡಿ, ಜಾತ್ರೊೃೀತ್ಸವಕ್ಕೆ ವಿಡಿಯೋ ಟ್ರೈಲರ್ ಸಾಂಗ್ ಮೂಲಕ ಆಹ್ವಾನ ನೀಡಲಾಗುತ್ತಿದೆ.
ಮಠದ ವಸತಿ ನಿಲಯದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಹಾಡು ಚಿತ್ರೀಕರಿಸಲಾಗಿದೆ. ಬಣ್ಣ ಬಣ್ಣದ ಬಲೂನ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅಜ್ಜನ ಜಾತ್ರೆಗೆ ಬನ್ನಿ ಎಂಬ ಕನ್ನಡ ವಾಕ್ಯ ರಚಿಸಲಾಯಿತು. ಆ ದೃಶ್ಯವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಲಾಗಿದೆ. ‘ಭಕ್ತಿಯ ಮನೆ ಮನಗಳಲ್ಲಿ, ಮುಕ್ತಿಯ ಕೆನೆ ನೆನಹಿನಲ್ಲಿ ಎಂಬ ಹಾಡು ಇದಾಗಿದ್ದು, ಗಾಯಕ ಸದಾಶಿವ ಪಾಟೀಲರ ಸಿರಿ ಕಂಠದಲ್ಲಿ ಮೂಡಿ ಬಂದಿದೆ. ಹಾಡಿನಲ್ಲಿ ಭಕ್ತಿ ಸಂಗೀತ, ಶ್ರೀಮಠದ ಜಾತ್ರೆಯ ಚಿತ್ರ, ಪುಣ್ಯಕಾರ್ಯಗಳು, ಪ್ರಾಕೃತಿಕ ಬೆಟ್ಟ, ಗುಡ್ಡಗಳ, ಕೆರೆ, ಹಳ್ಳದ ಚಿತ್ರ ಬಳಸಿಕೊಳ್ಳಲಾಗಿದೆ. ಇದೇ ವೀಡಿಯೋ ಟ್ರೇಲರ್ ಸಾಂಗ್ ಬಳಸಿ ಶ್ರೀಮಠದ ಭಕ್ತರಿಗೆ ಜಾತ್ರೆಗೆ ಆಹ್ವಾನ ನೀಡಲಾಗುತ್ತಿದೆ. ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸಲು Gavmath jatra nvtaton 2020 ಟೈಪ್ ಮಾಡಿ ಹುಡುಕಬಹುದು. ಫೇಸ್ಬುಕ್‌ನಲ್ಲಿ ವೀಕ್ಷಿಸಲು www.facebook.com/gavmath.koppal ವೀಕ್ಷಿಸಬಹುದು.
ದವಸ-ಧಾನ್ಯ ಅರ್ಪಣೆ
ಮಹಾದಾಸೋಹಕ್ಕೆ ಕುಟುಗನ ಹಳ್ಳಿ, ಟಣಕಣಕಲ್, ಬಂಡಿ, ಚಿಲವಾಡಗಿ, ಕಾಸನಕಂಡಿ, ಅಗೆದಾಳ ಗ್ರಾಮಗಳ ಭಕ್ತರುಗಳು ಗುರುವಾರ ದವಸ-ಧಾನ್ಯ ಅರ್ಪಿಸಿದರು. ಭತ್ತ, ಅಕ್ಕಿ, ಸಜ್ಜೆ, ಮೆಕ್ಕೆಜೋಳ,ಬೆಲ್ಲ, ಕುಂಬಳಕಾಯಿ ಹಾಗೂ ಸಿಹಿ ಬೂಂದಿ ಸೇರಿ ಇತರ ಆಹಾರ ಪದಾರ್ಥಗಳನ್ನು ಅಲಂಕೃತ ಎತ್ತಿನ ಬಂಡಿಗಳಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಆಗಮಿಸಿ ಮಠಕ್ಕೆ ನೀಡಿದರು. ದಾನಿಗಳಿಗೆ ಗವಿಶ್ರೀಗಳು ಆಶೀರ್ವಸಿದರು.