ಜಿಲ್ಲೆ

‘ಪೈಜು ಮತ್ತು ಹುಂಜ’ ಮಕ್ಕಳ ಚಲನಚಿತ್ರದ ಟ್ರೇಲರ್ ಬಿಡುಗಡೆ

ಮೈಸೂರು: ನಗರದ ಯೂನಿಟಿ ಮೂವೀಸ್ ಬ್ಯಾನರ್‌ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಮಾಜಿಕ ಕಳಕಳಿಯುಳ್ಳ ‘ಪೈಜು ಮತ್ತು ಹುಂಜ’ ಮಕ್ಕಳ ಚಲನಚಿತ್ರದ ಟ್ರೇಲರ್, ಟೀಜರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಭಾನುವಾರ ನಗರದ ಡಿಆರ್‌ಸಿ ಫಂಕ್ಷನ್ ಹಾಲ್‌ನಲ್ಲಿ ನಡೆಯಿತು.

ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಚಲನಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿ, ಇತ್ತೀಚೆಗೆ ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳು ಬರುತ್ತಿರುವುದು ಕಡಿಮೆಯಾಗಿದೆ. ಯೂನಿಟಿ ಮೂವೀಸ್ ಇಂತಹ ಉತ್ತಮ ಪ್ರಯತ್ನಕ್ಕೆ ಕೈ ಹಾಕಿರುವುದು ಸಂತಸದ ವಿಚಾರ ಎಂದರು.

ಮಕ್ಕಳ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಕಾಣುತ್ತಿಲ್ಲ. ಮಕ್ಕಳಿಗೋಸ್ಕರ ಯೂನಿಟಿ ಮೂವೀಸ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ. ಈ ಸಿನಿಮಾಗೆ ಸರ್ಕಾರದಿಂದ ಅಗತ್ಯ ನೆರವು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಶಾಸಕ ತನ್ವೀರ್ ಸೇಠ್, ನಗರ ಪಾಲಿಕೆ ಮಾಜಿ ಸದಸ್ಯ ಸೌಕತ್ ಪಾಷ, ಪತ್ರಿಕೋದ್ಯಮಿ ಶಿವಕುಮಾರ್, ಸಾಹಿತಿ ಮೋಹನ್, ಚಿತ್ರದ ನಿರ್ದೇಶಕ ಶರತ್ ಬಿಳಿನೆಲೆ ಹಾಗೂ ಇತರರು ಇದ್ದರು.