ಮಂಡ್ಯ: ಗಣಿಗಾರಿಕೆಯಿಂದ ಕೃಷ್ಣರಾಜಸಾಗರ ಅಣೆಕಟ್ಟೆಗೆ ತೊಂದರೆ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಟ್ರಯಲ್ ಬ್ಲಾಸ್ಟ್ ಮಾಡಲು ಜು.25 ರಿಂದ 31ರವರೆಗೆ ದಿನಾಂಕ ನಿಗದಿಯಾಗಿದೆ. ಪ್ರಯೋಗ ಯಶಸ್ವಿಯಾದರೆ ವಿವಾದಕ್ಕೆ ತೆರೆಬೀಳುವ ಸಾಧ್ಯತೆ ಇದೆ.
ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಟ್ರಯಲ್ ಬ್ಲಾಸ್ಟ್‌ನಿಂದಷ್ಟೇ ಎಲ್ಲರ ಗೊಂದಲ, ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎನ್ನುವ ಸಲಹೆ ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ದಿನಾಂಕ ನಿಗದಿಪಡಿಸಿ ಪ್ರಾಯೋಗಿಕ ಪರೀಕ್ಷೆ ಮಾಡಿಸಲಾಗುತ್ತಿದೆ.
ರದ್ದಾಗಿದ್ದ ಟ್ರಯಲ್ ಬ್ಲಾಸ್ಟ್: ಜೀವನಾಡಿ ಕೆಆರ್‌ಎಸ್ ಡ್ಯಾಂಗೆ ಗಣಿಗಾರಿಕೆಯಿಂದ ಅಪಾಯ ಎದುರಾಗಿದೆ ಎನ್ನುವ ಆತಂಕ ಹಿಂದಿನಿಂದಲೂ ಇದೆ. ಹಲವು ನಾಯಕರು, ಸಂಘಟನೆಗಳು ಈ ಬಗ್ಗೆ ಹೋರಾಟ ಮಾಡಿಕೊಂಡು ಬಂದಿವೆ. ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಒತ್ತಾಯ ಕೇಳಿಬರುತ್ತಲೇ ಇದೆ. ಈ ನಡುವೆ ಅಂದರೆ 2018ರಲ್ಲಿ ಕೆಆರ್‌ಎಸ್ ಡ್ಯಾಂನ ಉತ್ತರದ ಬೇಬಿ ಬೆಟ್ಟ ಪ್ರದೇಶದ 10.5 ಕಿ.ಮೀ. ವ್ಯಾಪ್ತಿಯಲ್ಲಿ ಭಾರಿ ಸ್ಫೋಟಕ ಬಳಸಿದ್ದರಿಂದ ಕಂಪನವಾಗಿರುವ ಬಗ್ಗೆ ಕೆಎಸ್‌ಎನ್‌ಡಿಎಂಸಿ, ಅಂದಿನ ಡಿಸಿ ಎನ್.ಮಂಜುಶ್ರೀ ಅವರಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ವಿಷಯದ ಆಧಾರದ ಮೇಲೆ ಗಣಿಗಾರಿಕೆ ನಡೆಸದಂತೆ ಡಿಸಿ ಆದೇಶ ಮಾಡಿದ್ದರು. ಆದರೆ ಗಣಿಗಾರಿಕೆ ಸಂಪೂರ್ಣ ನಿಷೇಧಕ್ಕೆ ಪರ-ವಿರೋಧ ಎರಡೂ ಇದೆ.
ಈ ನಡುವೆ ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಜಾರ್ಖಂಡ್‌ನ ಧನಬಾದ್‌ನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರಕ್ಕೆ 18.58 ಲಕ್ಷ ರೂ.ಗಳನ್ನು ಕಾವೇರಿ ನೀರಾವರಿ ನಿಗಮದಿಂದ ಪಾವತಿಸಲಾಗಿತ್ತು. ಆ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗಿರಲಿಲ್ಲ. ಕಟ್ಟೆಗೆ ಅಪಾಯ ಇದೆಯೇ ಎಂಬುದನ್ನು ಪತ್ತೆ ಹಚ್ಚಲು 2019ರ ಜನವರಿಯಲ್ಲಿ ತಜ್ಞರ ತಂಡ ಆಗಮಿಸಿತ್ತು. ಈ ಸಮಯದಲ್ಲಿಯೂ ಪರ-ವಿರೋಧ ಪ್ರತಿಭಟನೆ ನಡೆದ ಕಾರಣಕ್ಕೆ ಬ್ಲಾಸ್ಟ್ ರದ್ದಾಗಿತ್ತು.
ವರದಿ ಕೊಡಲು ಮೂರು ತಿಂಗಳು: ಟ್ರಯಲ್ ಬ್ಲಾಸ್ಟ್ ಮಾಡಲು ಜಾರ್ಖಂಡ್‌ನ ಧನಬಾದ್‌ನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರ ತಜ್ಞರು ಜು.24ರಂದು ಕೆಆರ್‌ಎಸ್‌ಗೆ ಆಗಮಿಸಲಿದ್ದಾರೆ. 25ರಿಂದ 31ರವರೆಗೆ ಪ್ರಯೋಗ ನಡೆಯಲಿದೆ. ಇದಕ್ಕೆ ಪೂರಕವಾಗಿ 20 ರಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ ಅಣೆಕಟ್ಟೆಯಿಂದ 20 ಕಿ.ಮೀ ವ್ಯಾಪ್ತಿಯೊಳಗೆ ಐದು ಕಡೆ ಟ್ರಯಲ್ ಬ್ಲಾಸ್ಟ್ ಮಾಡಲು ಜಾಗ ನಿಗದಿಯಾಗಿದೆ. ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡರೆ ಸಂಶೋಧನಾ ಕೇಂದ್ರ ತಜ್ಞರು ಮೂರು ತಿಂಗಳೊಳಗೆ ಖಚಿತ ವರದಿ ನೀಡಲಿದ್ದಾರೆ. ಇನ್ನು ಈ ವರದಿ ಮಹತ್ವ ಪಡೆದುಕೊಂಡಿದ್ದು, ಇದರಲ್ಲಿ ಬರುವ ಮಾಹಿತಿಯಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಬೇರೆ ಅಣೆಕಟ್ಟೆಗಳ ಸಮೀಪ ನಡೆಯುವ ಗಣಿಗಾರಿಕೆ ಬಗ್ಗೆ ಯಾವ ನಿಯಮ ರೂಪಿಸಬೇಕೆಂಬುದಕ್ಕೆ ಸಹಕಾರಿಯಾಗಲಿದೆ.
ಜು.25ರಿಂದ ಟ್ರಯಲ್ ಬ್ಲಾಸ್ಟ್‌ಗೆಂದು ದಿನ ನಿಗದಿಯಾಗಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಜು.20ರಿಂದ ಮಾಡಿಕೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಪದ್ಮಜಾ ಪ್ರತಿಕ್ರಿಯಿಸಿದ್ದಾರೆ.