ಉಪ್ಪಿನಂಗಡಿ (ದ.ಕ.): ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಪ್ರದೇಶದಲ್ಲಿ ಗಡಿ ದೇವಸ್ಥಾನದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಬಂಡೆಕಲ್ಲು ಬೆಟ್ಟದಿಂದ ಕುಸಿದು ಹೆದ್ದಾರಿಗೆ ಬಿದ್ದ ಪರಿಣಾಮ ಶನಿವಾರ ವಾಹನ ಸಂಚಾರಕ್ಕೆ ತಡೆ ಉಂಟಾಯಿತು.
ಘಟನೆ ಸಂಭವಿಸಿದಾಗ ವಾಹನಗಳಿರಲಿಲ್ಲ. ಹೀಗಾಗಿ ಅವಘಡ ಸಂಭವಿಸಲಿಲ್ಲ. ಪೊಲೀಸರು ವಾಹನ ಸಂಚಾರವನ್ನು ತಡೆದರು. ಬಳಿಕ ಬಂಡೆಕಲ್ಲನ್ನು ಬದಿಗೆ ಸರಿಸುವ ಕಾರ್ಯಾಚರಣೆ ಕೈಗೊಂಡು, ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಸಕಲೇಶಪುರ ಠಾಣಾ ವ್ಯಾಪ್ತಿಯ ದೋಣಿಗಲ್ ಎಂಬಲ್ಲಿ ಗುಡ್ಡ ಕುಸಿದ ಕಾರಣ, ಅಲ್ಲಿಯೂ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು.