ಕಿರುವಾರ ಎಸ್. ಸುದರ್ಶನ್ ಕೋಲಾರ
ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್ಟಿಒ) ಭ್ರಷ್ಟಾಚಾರದ ಕೂಪಗಳಾಗಿವೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಆದರೂ ಕಚೇರಿಗಳಲ್ಲಿನ ಅವ್ಯವಸ್ಥೆ ಸರಿಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಲಾರ ಜಿಲ್ಲೆಯ ಆರ್ಟಿಒ ಹಾಗೂ ಕೆಜಿಎಫ್ ಎಆರ್ಟಿಒ ಕಚೇರಿಗಳಲ್ಲಿ ದುಡ್ಡು ಕೊಡದೆ ಯಾವುದೇ ಸೌಲಭ್ಯ ಪಡೆಯಲು ಆಗುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಅಕ್ರಮ ತಡೆಗೆ ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳು, ವಿವಿಧ ಸಂಘ& ಸಂಸ್ಥೆಗಳಿಂದ ಒತ್ತಾಯ ವ್ಯಕ್ತವಾದರೂ ಹಿರಿಯ ಅಧಿಕಾರಿಗಳು ರ್ನಿಲಕ್ಷ$್ಯವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಅನುಮಾನ ಮೂಡಲು ಕಾರಣವಾಗಿದೆ.
ಇದರ ನಡುವೆ ಮತ್ತೊಂದು ಅಕ್ರಮ ಬಯಲಾಗಿದೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಖಾಸಗಿ ಬಸ್ಗಳು ಸಂಚರಿಸುತ್ತಿದ್ದು, ಅವುಗಳ ಪೈಕಿ ಬಹುತೇಕ ಬಸ್ಗಳು ಪಮೀರ್ಟ್ ಪಡೆದುಕೊಂಡಿರುವ ಮಾರ್ಗ ಬಿಟ್ಟು, ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಅಲ್ಲದೆ ಸಮರ್ಪಕವಾಗಿ ದಾಖಲೆ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದರು. ಆದರೆ ಆಗ, ನೆಪಮಾತ್ರಕ್ಕೆ ಎಂಬಂತೆ ಒಂದು ದಿನ ಕಾರ್ಯಾಚರಣೆ ನಡೆಸಿದ ಆರ್ಟಿಒ ಅಧಿಕಾರಿಗಳು ಮತ್ತೆ ಸುಮ್ಮನಾಗಿದ್ದಾರೆ.
ಹಲವು ಖಾಸಗಿ ಬಸ್ಗಳಿಗೆ ರೂಟ್ ಪಮೀರ್ಟ್ ಇಲ್ಲ, ಸಾಕಷ್ಟು ಬಸ್ಗಳು ಕಚೇರಿ ಮುಂದೆಯೇ ಓಡಾಡುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಕೆಲ ಬಸ್ಗಳು ರಸ್ತೆಯಲ್ಲಿ ಸಂಚರಿಸಲು ಯೋಗ್ಯವಲ್ಲದಿದ್ದರೂ ಅವುಗಳಿಗೆ ಅಧಿಕಾರಿಗಳು ದೃಢೀಕರಣ ಪತ್ರ ನೀಡುವ ಮೂಲಕ ಜನರ ಪ್ರಾಣದ ಜತೆ ಚಲ್ಲಾಟವಾಡುತ್ತಿದ್ದಾರೆ.
ಗ್ರಾಮೀಣ ಮಾರ್ಗದಲ್ಲಿ ಸಂಚರಿಸಲು ಅನುಮತಿ ಪಡೆದುಕೊಂಡಿರುವ ಹಾಗೂ ಬೆಂಗಳೂರು ತನಕ ಪರವಾನಿಗೆ ಪಡೆದುಕೊಂಡಿರುವ ಬೆರಳೆಣಿಕೆಯಷ್ಟು ಬಸ್ ಮಾಲೀಕರು, ಆರ್ಟಿಒ ಭಯವಿಲ್ಲದೆ ನಿತ್ಯ ಬೆಂಗಳೂರಿಗೆ ಬಸ್ ಓಡಿಸುತ್ತಿರುವುದಲ್ಲದೆ, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ.
2&3 ಬಸ್ಗಳಿಗೆ ಒಂದೇ ನಂಬರ್ ಬಳಕೆ
ಒಂದೇ ನಂಬರ್ ಬಳಕೆ ಮಾಡಿಕೊಂಡು ಎರಡು ಮೂರು ಬಸ್ಗಳು ಓಡಾಟ ಮಾಡುತ್ತಿದ್ದ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳಿಗೆ ಗೊತ್ತಾಗಿ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿ ಹಾಕಿಕೊಂಡಿದ್ದವು. ಆಗ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಇದು ಮುಂದುವರಿಯದಂತೆ ಎಚ್ಚರಿಕೆ ನೀಡಿದ್ದರು, ಆದರೆ, ಈಗಲೂ ಒಂದೇ ನಂಬರಿನಲ್ಲಿ ಎರಡ್ಮೂರು ಬಸ್ಗಳು ಸಂಚರಿಸುತ್ತಿವೆ ಎಂಬ ಆರೋಪ ಇದೆ.
ನಿತ್ಯವೂ ಮಾಮೂಲಿ ವಸೂಲಿ
ನಗರ ಪ್ರವೇಶಕ್ಕೆ ಕೆಲ ಬಸ್ಗಳಿಗೆ ಅನುಮತಿಯಿಲ್ಲ, ಆದರೆ ಆರ್ಥಿಕ ಲಾಭದ ದೃಷ್ಟಿಯಿಂದ ನಗರ ಪ್ರವೇಶ ಮಾಡುತ್ತಾರೆ. ಇದಕ್ಕೆ ಆರ್ಟಿಒ ಅಧಿಕಾರಿಗಳಿಗೆ ಪ್ರತಿದಿನವೂ ಮಾಮೂಲು ವಸೂಲಿ ಮಾಡಿಕೊಡಲು ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪವಿದಿದೆ. ಕ್ಲಾಕ್ ಟವರ್, ಬಸ್ ಬಿಲ್ದಾಣ, ಹಳೇಬಸ್ ನಿಲ್ದಾಣ ಸಮೀಪ ವಸೂಲಿಗಾರರನ್ನು ತಂಡದಂತೆ ನೇಮಕ ಮಾಡಿಕೊಂಡಿದ್ದಾರೆ. ಪ್ರತಿ ಖಾಸಗಿ ಬಸ್ನವರು 50 ರಿಂದ 100 ರೂ. ಕೊಡಲೇ ಬೇಕಿದೆ.
ಬಸ್ ಪರಿಶೀಲಿಸದೆ ಅನುಮತಿ?
ಬಸ್ನ ಚಾಸ್ಸಿ 2013ರಲ್ಲಿ ತಯಾರಾಗಿದ್ದರೆ, ಅದೇ ನಂಬರಿಗೆ 2021&22ರಲ್ಲಿ ತಯಾರು ಮಾಡಲಾಗಿದೆ ಎಂದು ಹೇಳಿ ಗ್ಯಾರೇಜಿನಲ್ಲಿ ದಾಖಲೆ ಸೃಷ್ಟಿ ಮಾಡುವ ಜಾಲ ಅವ್ಯಾವಹತವಾಗಿದೆ. ಬಸ್ ಪರಿಶೀಲಿಸಿ ಅನುಮತಿ ನೀಡಬೇಕಾದ ಅಧಿಕಾರಿಗಳು ಸ್ಥಳಕ್ಕೆ ಬಸ್ಗಳನ್ನು ಕರೆಸಿಕೊಳ್ಳದೆ ಮಧ್ಯವರ್ತಿಗಳ ಮೂಲಕ ವ್ಯವಹಾರ ಕುದರಿಸಿಕೊಳ್ಳುವುದನ್ನೇ ದಂಧೆ ಮಾಡಿಕೊಂಡಿದ್ದಾರೆ. ಸೆಕ್ಷನ್ ಅಧಿಕಾರಿಗಳ ಕೆಲಸವನ್ನು ಮಧ್ಯವರ್ತಿಗಳು ಮಾಡುತ್ತಾರೆ, ಕಡತ ತಯಾರು ಮಾಡಿ ಆನ್ಲೈನ್ನಲ್ಲಿ ದಾಖಲು ಮಾಡಿದರೆ ಅಂತಿಮವಾಗಿ ಅಧಿಕಾರಿಗಳು ಥಂಬ್ ನೀಡುವ ಮೂಲಕ ಅನುಮತಿ ನೀಡುತ್ತಿದ್ದಾರೆ.