ಬೆಂಗಳೂರು : ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವ ಸವಾರರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಕಳ್ಳ ಸಿಗ್ನಲ್ ಕಂಟ್ರೋಲ್ ಮಾಡುವ ಸಿಸ್ಟಮ್‌ನ್ನೇ ದೋಚಿರುವುದು ಬೆಳಕಿಗೆ ಬಂದಿದೆ. ಕೆ.ಆರ್. ರಸ್ತೆಯ ಬೆಂಗಳೂರು ಮೆಡಿಕಲ್ ಕಾಲೇಜು ಜಂಕ್ಷನ್‌ನಲ್ಲಿ ಅಳವಡಿಸಿರುವ ಸಿಗ್ನಲ್ ದೋಚಿದ್ದಾರೆ. ಈ ಸಂಬಂಧ ವಿವಿ ಪುರ ಸಂಚಾರ ಠಾಣೆ ಎಎಸ್‌ಐ ಎಂ.ಸಿ. ಗೋವಿಂದರಾಜು ದೂರು ನೀಡಿದ್ದಾರೆ.
ದೂರಿನಲ್ಲಿ ‘ಪ್ರತಿದಿನ ಬೆಂಗಳೂರು ಮೆಡಿಕಲ್ ಕಾಲೇಜು ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅ.20ರ ಬೆಳಗ್ಗೆ 7 ಗಂಟೆಗೆ ಕರ್ತವ್ಯ ನಿರ್ವಹಿಸಲು ಬಂದಾಗ ಜಂಕ್ಷನ್‌ನಲ್ಲಿ ಅಳವಡಿಸಿದ್ದ ಸಿಗ್ನಲ್ ಸಿಸ್ಟಮ್ ಕಳವಾಗಿರುವುದು ಗೊತ್ತಾಗಿದೆ. ಸಿಗ್ನಲ್ ಕಂಟ್ರೋಲರ್, ಎಸಿ-ಡಿಸಿ ಪವರ್ ಸಪ್ಲೇಯರ್ ಯುನಿಟ್, ಚಾರ್ಜರ್ ಕಂಟ್ರೋಲರ್, ರಿಗ್ಯೂಲೇಟರ್ ಕಳವಾಗಿದೆ. ಇವುಗಳ ಮೌಲ್ಯ ಅಂದಾಜು 3.20 ಲಕ್ಷ ರೂ. ಆಗಿದೆ’ ಎಂದು ಎಎಸ್‌ಐ ಉಲ್ಲೇಖಿಸಿದ್ದಾರೆ. ಈ ಮೇರೆಗೆ ವಿಶ್ವೇಶ್ವರಪುರ ಠಾಣೆ ಪೊಲೀಸರು ಎ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟ್ರಾಫಿಕ್ ಸಿಗ್ನಲ್‌ಗಳ ಕುರಿತು ಗೊತ್ತಿರುವ ಕಳ್ಳರ ಗ್ಯಾಂಗ್ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಕ್ಕಪಕ್ಕದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದು, ಕಳ್ಳತನ್ನು ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.