ನಂಜನಗೂಡು ತಾಲೂಕು ದೊಡ್ಡಕವಲಂದೆಯಲ್ಲಿ ಆಯೋಜಿಸಿದ್ದ ಸಂಚಾರ ನಿಯಮ ಜಾಗೃತಿ ಅಂಗವಾಗಿ ಆಯೋಜಿಸಿದ್ದ ಬೈಕ್ ಜಾಥಾ ಏರ್ಪಡಿಸಲಾಗಿತ್ತು. ಬಿ.ಬಸವರಾಜು, ಎಸ್.ಬಿ ರಮೇಶ್, ಲಿಂಗದೇವರು, ಬಸವರಾಜು, ನಿಂಗೇಗೌಡ ಇತರರಿದ್ದರು. 
ಜಿಲ್ಲೆ

ಸಂಚಾರ ನಿಯಮ ಕಡ್ಡಾಯ ಪಾಲನೆ ಅಗತ್ಯ

ವಸಂತಕುಮಾರ್ ಬಿ

ನಂಜನಗೂಡು: ವಾಹನ ಚಲಾಯಿಸುವವರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜೀವದ ಜತೆಗೆ ಇತರರು ಜೀವವನ್ನು ರಕ್ಷಿಸಬೇಕು ಎಂದು ಕವಲಂದೆ ಪೊಲೀಸ್ ಠಾಣೆ ಪಿಎಸ್‌ಐ ಬಿ.ಬಸವರಾಜು ಹೇಳಿದರು.

ತಾಲೂಕಿನ ದೊಡ್ಡಕವಲಂದೆ, ದೇವನೂರು, ತಗಡೂರು, ಚಿಕ್ಕ ಕವಲಂದೆ ಗ್ರಾಮಗಳಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಮತ್ತು ಕವಲಂದೆ ಪೊಲೀಸ್ ಠಾಣಾ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂಚಾರ ನಿಯಮಗಳ ಜಾಗೃತಿ ಹಿನ್ನೆಲೆಯಲ್ಲಿ ದೊಡ್ಡಕವಲಂದೆಯಲ್ಲಿ ನಡೆದ ಬೈಕ್ ರ‌್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಸ್ತೆಯಲ್ಲಿ ನಿಂತು ತಪ್ಪು ಮಾಡುವ ವಾಹನ ಚಾಲಕರಿಗೆ ಒಮ್ಮೆಲೆ ದಂಡ ಹಾಕುವ ಬದಲು, ಮೊದಲು ರಸ್ತೆ ಸುರಕ್ಷತೆ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ನಂತರವೂ ತಪ್ಪು ಮಾಡುವುದು ಮುಂದುವರಿದಲ್ಲಿ, ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ಹಾಕುವುದು ಖಚಿತ ಎಂದು ಅವರು ಎಚ್ಚರಿಸಿದರು.

ವಾಹನ ಏರಿದಾಕ್ಷಣ ನಿಯಮಗಳು ಅನ್ವಯವಾಗುತ್ತವೆ. ಹೆಲ್ಮೆಟ್ ಧರಿಸದಿರುವುದು ಕಾನೂನು ಉಲ್ಲಂಘನೆಯಾಗುತ್ತದೆ. ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿದರು.

ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ರಸ್ತೆ ಸುರಕ್ಷತಾ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವುದು ಅವಶ್ಯಕ. ವಾಹನ ಚಲಾಯಿಸುವಾಗ ಮದ್ಯಪಾನ. ಧೂಮಪಾನ, ಮೊಬೈಲ್‌ನಲ್ಲಿ ಮಾತನಾಡುವುದು ಅಪಾಯಕಾರಿ ಎಂದರು.

ದೇಶದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು, ವರ್ಷಕ್ಕೆ ಸುಮಾರು 1.5 ಲಕ್ಷ ಜನರು ನಿರ್ಲಕ್ಷೃದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಸ್ವತಃ ವಾಹನ ಸವಾರರು ಸಾವನ್ನಪ್ಪುವುದಲ್ಲದೆ, ಮತ್ತೊಬ್ಬರ ಪ್ರಾಣಕ್ಕೂ ತೊಂದರೆ ಮಾಡುತ್ತಾರೆ. ನಾಗರಿಕರು ತಮಗೆ ಪೊಲೀಸ್ ಸಹಾಯ ಬೇಕಾದರೆ 112 ಸಂಖ್ಯೆಗೆ ಕರೆ ಮಾಡಬೇಕು ಎಂದರು.

ಎಸ್.ಬಿ ರಮೇಶ್, ಎಎಸ್‌ಐಗಳಾದ ಲಿಂಗದೇವರು, ಬಸವರಾಜು, ನಿಂಗೇಗೌಡರು, ಸಿಬ್ಬಂದಿ ಚಂದ್ರು , ಸುರೇಶ್, ಮಹೇಶ್ , ರಾಜಶೇಖರ್, ಗಣೇಶ್, ಮಂಜು, ರವಿ, ರಮೇಶ್ ಇತರರಿದ್ದರು.