ಜಿಲ್ಲೆ

ಉಕ್ಕಿನ ಸೇತುವೆಯಲ್ಲಿ ಸಂಚಾರ ನಿರ್ಬಂಧ: ಶಿಥಿಲಗೊಂಡ ಪಾಣೆಮಂಗಳೂರು ಸಂಕ : ತಹಸೀಲ್ದಾರ್ ಅರ್ಚನಾ ಸೂಚನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಸುರಕ್ಷೆ ದೃಷ್ಟಿಯಿಂದ ಪಾಣೆಮಂಗಳೂರಿನ ಉಕ್ಕಿನ ಸೇತುವೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಗೊಳಿಸಿದ್ದು, ಪುರಸಭೆ ವತಿಯಿಂದ ನಿಗಾ ವಹಿಸಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ.ಭಟ್ ಸೂಚನೆ ನೀಡಿದ್ದಾರೆ.

ಹಳೇ ಉಕ್ಕಿನ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಸೇತುವೆಯಲ್ಲಿ ಬಿರುಕು ಮೂಡಿದ್ದರಿಂದ ಕೆಲವು ತಿಂಗಳ ಹಿಂದೆ ಕಬ್ಬಿಣ ಕಮಾನು ಅಳವಡಿಸಿ ಸಂಚಾರ ನಿರ್ಬಂಧಿಸಲಾಗಿತ್ತು. ಆದರೂ ಕಮಾನಿಗೆ ಹಾನಿಗೊಳಿಸಿ ಭಾರಿ ವಾಹನಗಳು ಸಂಚರಿಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ತಾತ್ಕಾಲಿಕವಾಗಿ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.

ಕಳೆಪೆ ತಡೆಬೇಲಿ

ಸೇತುವೆ ಧಾರಣಾ ಸಾಮರ್ಥ್ಯದ ವರದಿಗಾಗಿ ಕಾಯಲಾಗುತ್ತಿದ್ದು, ಇಲಾಖೆಯಿಂದ ದೊರೆಯತ ಬಳಿಕ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ಭಾರಿವಾಹನ ಸಂಚಾರ ತಡೆಗಾಗಿ ಬಂಟ್ವಾಳ ಪುರಸಭೆ ವತಿಯಿಂದ ಎರಡು ಬಾರಿ ಕಬ್ಬಿಣದ ಕಮಾನು ಅಳವಡಿಸಲಾಗಿದ್ದು, ಮೊದಲ ಬಾರಿ ಅಳವಡಿಸಿದ್ದ ಕಮಾನು ತೀರಾ ಕಳಪೆಯಾಗಿದ್ದವು. ಎರಡನೇ ಬಾರಿ ಅಳವಡಿಸಿದ ಕಮಾನು ಭಾರಿ ವಾಹನಗಳ ಸಂಚಾರದಿಂದ ಹಾನಿಗೊಳಗಾಗಿತ್ತು. ಮಂಗಳವಾರ ಬೆಳಗ್ಗೆ ಮೀನು ಸಾಗಾಟದ ಪಿಕಪ್ ತಡೆಬೇಲಿ ಮೀರಿ ಸಂಚರಿಸಿದ ಪರಿಣಾಮ ಮುರಿದು ಬಿದ್ದಿತ್ತು.

ವಾಹನ ಸವಾರರಿಗೆ ಸಂಕಷ್ಟ

ಪಾಣೆಮಂಗಳೂರು ಹಳೇ ಸೇತುವೆ ಶಿಥಿಲಗೊಂಡಿದ್ದರೂ ದ್ವಿಚಕ್ರ ವಾಹನ, ಕಾರುಗಳ ಮೂಲಕ ಆಲಡ್ಕ, ನಂದಾವರ, ಮಾರ್ನಬೈಲು, ಸಜೀಪ, ಪಣೋಲಿಬೈಲು ಮತ್ತಿತರ ಕಡೆಗಳಿಗೆ ಸಂಚರಿಸಲು ಅವಕಾಶವಿತ್ತು. ಇದೀಗ ಸಂಪೂರ್ಣ ಸಂಚಾರ ನಿಷೇಧರಿಂದ ನಿತ್ಯ ಸವಾರರಿಗೆ ತೊಂದರೆಯಾಗಿದೆ. ಪಾಣೆಮಂಗಳೂರು ಪೇಟೆಗೆ ಆಗಮಿಸುವವರು ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ದ್ವಿಚಕ್ರ ವಾಹನ, ಕಾರುಗಳಿಗೆ ಸಂಚರಿಸಲು ಅವಕಾಶ ನೀಡಬೇಕೆಂದು ಪಾಣೆಮಂಗಳೂರು ಭಾಗದ ಜನರು ಒತ್ತಾಯಿಸಿದ್ದಾರೆ.