ಜಿಲ್ಲೆ

ಸಂಚಾರ ಸಮಸ್ಯೆ ನಿವಾರಣೆ: ಉಜಿರೆ ಗ್ರಾಮಸಭೆಯಲ್ಲಿ ಆಗ್ರಹ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಅಧ್ಯಕ್ಷೆ ಉಷಾ ಕಿರಣ ಕಾರಂತ್ ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಉಜಿರೆ ಪೇಟೆಯಲ್ಲಿ ನಾನಾ ಕಾರಣಗಳಿಂದ ಸುಗಮ ವಾಹನ ಸಂಚಾರ ಹಾಗೂ ಪ್ರಯಾಣಿಕರಿಗೆ ಅನನುಕೂಲ ಉಂಟಾಗುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಪಶು ವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

ಉಜಿರೆ ಪೇಟೆಯಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡುವುದರಿಂದ ಮತ್ತು ಬೀದಿಬದಿ ವ್ಯಾಪಾರಿಗಳಿಂದ ವಾಹನ ಸವಾರರಿಗೆ ಸಮಸ್ಯೆಗಳಾಗುತ್ತಿವೆ. ಪೊಲೀಸರು ಉಜಿರೆ ದ್ವಾರದ ಬಳಿ ವಾಹನ ತಪಾಸಣೆ ನಡೆಸುವುದರಿಂದ, ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ, ಬೆಂಗಳೂರಿಗೆ ತೆರಳುವ ಖಾಸಗಿ ಬಸ್‌ಗಳು ರಾತ್ರಿ ಹೊತ್ತು ಸರ್ಕಲ್ ನಿಯಮವನ್ನು ಮೀರಿ ಸಂಚರಿಸುವುದರಿಂದ ಅಪಘಾತಗಳಿಗೂ ಕಾರಣವಾಗುತ್ತಿದೆ ಎಂದು ಉಜಿರೆ ವರ್ತಕರ ಸಂಘದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಪಂಚಾಯಿತಿ ಅಧ್ಯಕ್ಷೆ ಉತ್ತರಿಸಿ ಈ ಬಗ್ಗೆ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಲಾಗಿದೆ. ಆದರೆ ಅವರು ಈವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದರು.

ಕೀಟನಾಶಕಗಳ ದುಷ್ಪರಿಣಾಮಗಳ ಕುರಿತು, ಕೃಷಿಗೆ ಎಷ್ಟು ಪ್ರಮಾಣದಲ್ಲಿ ನೀರು ನೀಡಬೇಕು, ಇಲಾಖಾಧಿಕಾರಿಗಳ ಫೋನ್ ನಂಬರ್ ಇತ್ಯಾದಿ ವಿವರಗಳನ್ನು ನೀಡಬೇಕೆಂದು ಗ್ರಾಮಸ್ಥ ಸುಬ್ರಹ್ಮಣ್ಯ ಭಟ್ ಸಭೆಯ ಗಮನಕ್ಕೆ ತಂದರು. ಉಚಿತ ವಿದ್ಯುತ್ ಯೋಜನೆಯಿಂದ ನೀರು ಪೋಲಾಗುವಂತಾಗಿದೆ ಎಂಬ ವಿಚಾರ ಗ್ರಾಮಸಭೆಯಲ್ಲಿ ಪ್ರಸ್ತಾಪವಾಯಿತು. ಉಜಿರೆಗೆ ವಿದ್ಯುತ್ ಸಬ್ ಸ್ಟೇಷನ್ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ತಾಲೂಕಿನ ಅಲ್ಲಲ್ಲಿ ಹೆಚ್ಚು ಸಾಮರ್ಥ್ಯದ ಪರಿವರ್ತಕಗಳ ಅಳವಡಿಕೆ ನಡೆಯುತ್ತಿದ್ದು ಇದರಿಂದ ವಿದ್ಯುತ್ ಸಮಸ್ಯೆಗಳು ನಿವಾರಣೆಗೊಳ್ಳಲಿವೆ ಎಂದು ಮೆಸ್ಕಾಂ ಉಪ ವಿಭಾಗದ ಎಇ ಕೃಷ್ಣೇಗೌಡ ಭರವಸೆ ನೀಡಿದರು.

ರಸ್ತೆ ವಿಸ್ತರಣೆಗಾಗಿ ಮರ ತೆರವುಗೊಳಿಸುತ್ತಿದ್ದೀರಿ ಇದಕ್ಕೆ ಬದಲಾಗಿ ಎಷ್ಟು ಗಿಡಗಳನ್ನು ನೆಡುತ್ತೀರಿ? ಆನೆ, ಚಿರತೆ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ನಿವೇಶನ ಹಂಚಿಕೆಗೆ ನಿಗದಿಗೊಂಡಿರುವ ಸ್ಥಳದಲ್ಲಿರುವ ಮರಗಳನ್ನು ಯಾವಾಗ ವಿಲೇವಾರಿ ಮಾಡುತ್ತೀರಿ? ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.ಬೀಟ್ ಪೊಲೀಸ್ ಹೆಚ್ಚಳದ ಕುರಿತು ಗ್ರಾಮಸ್ಥರಿಂದ ಬೇಡಿಕೆ ವ್ಯಕ್ತವಾಯಿತು. ರಾತ್ರಿ ಹೊತ್ತು ಅಂಗಡಿಗಳ ಮುಂಭಾಗದಲ್ಲಿ ದೀಪಗಳನ್ನು ಬೆಳಗಿಸುವಂತೆ, ಸಿಸಿಟಿವಿ ಅಳವಡಿಸುವಂತೆ ವರ್ತಕರಿಗೆ ಪೊಲೀಸ್ ಇಲಾಖೆಯ ಅಧಿಕಾರಿ ಸಲಹೆ ನೀಡಿದರು.

ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪುರಸ್ಕಾರ ಪಡೆದ ಅರಣ್ಯ ಇಲಾಖೆಯ ಉಪವಲಯರಣ್ಯಾಧಿಕಾರಿ ಕಮಲಾ ಅವರನ್ನು ಅಭಿನಂದಿಸಲಾಯಿತು. ಪ.ಜಾತಿ, ಪಂಗಡದ ಶೇ. 25 ನಿಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ 580 ಕುಟುಂಬಗಳಿಗೆ ತಲಾ ಎರಡರಂತೆ ಕುರ್ಚಿಗಳನ್ನು ವಿತರಿಸಲಾಯಿತು.

ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು. ಕಾರ್ಯದರ್ಶಿ ಶ್ರವಣ್ ಕುಮಾರ್ ವರದಿ, ಸಿಬ್ಬಂದಿ ರಮೇಶ್ ವಾರ್ಡ್ ಸಭೆಯ ಬೇಡಿಕೆ ಪಟ್ಟಿ ವಾಚಿಸಿದರು.

ಕುಡುಕರ ಕಾಟ

ಉಜಿರೆ ಬಸ್ ನಿಲ್ದಾಣಗಳಲ್ಲಿ ರಾತ್ರಿ ಕುಡುಕರ ಕಾಟ ಹೆಚ್ಚಿದ್ದು ಮಹಿಳೆಯರು, ಮಕ್ಕಳು ಬಸ್‌ಗಳಿಗೆ ಕಾಯಲು ಪರದಾಡುವಂತಾಗಿದೆ. ಅಗತ್ಯ ಸ್ಥಳಗಳಲ್ಲಿ ದೀಪಗಳನ್ನು ಅಳವಡಿಸಬೇಕು ಎಂದು ಗ್ರಾಮಸ್ಥರು ತಿಳಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ಸಿಲ್ಲದೆ ಪರದಾಡುವಂತಾಗಿದೆ. ಉಜಿರೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಇಲ್ಲಿನ ಟಿಸಿ ಪಾಯಿಂಟ್ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆ ತನಕ ಕಾರ್ಯನಿರ್ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.