ಜಿಲ್ಲೆ

ಸರ್ಕಲ್‌ಗಳಲ್ಲಿ ಟ್ರಾಫಿಕ್ ಕಿರಿಕಿರಿ

ಶಿವರಾಜ.ಎಂ
  • ಜಿ.ಕೆ.ಸುಗ್ಗರಾಜು ನೆಲಮಂಗಲ
    ನಗರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳ ನಾಲ್ಕು ರಸ್ತೆ ಸೇರುವ ನಾಡಪ್ರಭು ಕೆಂಪೇಗೌಡ ವೃತ್ತ ಹಾಗೂ ಸೊಂಡೇಕೊಪ್ಪ ವೃತ್ತದ ಬಳಿ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಎದುರಾಗಿದ್ದು ವಾಹನ ಸವಾರರ ಪರದಾಟ ಸಾಮಾನ್ಯ ಎನ್ನುವಂತಾಗಿದೆ.
    ಎರಡು ವರ್ಷದ ಹಿಂದೆ ಪೊಲೀಸ್ ಇಲಾಖೆಯಿಂದ ವೃತ್ತದಲ್ಲಿ ಅಳವಡಿಸಿದ್ದ ಸಿಗ್ನಲ್ ದೀಪಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ವೃತ್ತದಲ್ಲಿ ಸಿಗ್ನಲ್ ದೀಪಗಳಿಲ್ಲದೇ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-48ರ ಬೆಂಗಳೂರು-ತುಮಕೂರು ರಸ್ತೆ, ರಾಷ್ಟ್ರೀಯ ಹೆದ್ದಾರಿ-75ರ ಬೆಂಗಳೂರು- ಮಂಗಳೂರು ರಸ್ತೆ ಹಾಗೂ ನೆಲಮಂಗಲ ನಗರದಿಂದ ಕುಣಿಗಲ್ ಮುಖ್ಯರಸ್ತೆ ಸೇರಿ ನಾಲ್ಕು ರಸ್ತೆಗಳ ಸಂಗಮ ಸ್ಥಳವಾಗಿರುವ ನಾಡ ಪ್ರಭು ಕೆಂಪೇಗೌಡ ಸರ್ಕಲ್‌ನಲ್ಲಿ ಪ್ರತಿನಿತ್ಯ ವಾಹನ ದಟ್ಟಣೆಗೆ ಸಾರ್ವಜನಿಕರು ಹೈರಾಣಾಗುವಂತಾಗಿದೆ.
    ಗಂಭೀರವಾಗಿ ಪರಿಗಣಿಸುತ್ತಿಲ್ಲ: ನಗರದ ಕುಣಿಗಲ್ ವೃತ್ತದಲ್ಲಿ ಸಿಗ್ನಲ್ ದೀಪ ಕೆಟ್ಟಿರುವುದು ಒಂದೆಡೆಯಾದರೆ ಸೊಂಡೆಕೊಪ್ಪ ವೃತ್ತದಲ್ಲಿ ಸಿಗ್ನಲ್ ದೀಪ ಅಳವಡಿಕೆ ಮಾಡದಿರುವುದರ ಜತೆಗೆ ಸಂಚಾರ ಪೊಲೀಸರ ನಿಯೋಜನೆ ಮಾಡದಿರುವುದು ವಾಹನ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ವಾರದ ಸಂತೆ ನಡೆಯುವ ಪ್ರತಿ ಶುಕ್ರವಾರ ವಾಹನ ಸವಾರರ ಪಾಡು ಹೇಳ ತೀರದು. ಗಂಟೆಗಟ್ಟಲೆ ನಿಂತಲ್ಲೆ ನಿಂತು ಕಿರಿಕಿರಿ ಅನುಭವಿಸುತ್ತಿದ್ದರೂ ಸಂಚಾರ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ನಿರುಪಯುಕ್ತ ಸಿಗ್ನಲ್ ಕಂಬಗಳು: ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ 3 ವರ್ಷದ ಹಿಂದೆ ಸಂಚಾರ ಸಿಗ್ನಲ್ ದೀಪಗಳನ್ನು ಆವಳಡಿಸಲಾಗಿದೆ. ಲಕ್ಷಾಂತರ ರೂ. ವ್ಯಯಿಸಿ ಅಳವಡಿಸಲಾದ ಸಿಗ್ನಲ್ ಕಂಬಗಳು ತುಕ್ಕು ಹಿಡಿಯುತ್ತಿವೆ ಕಾರ್ಯಾರಂಭ ಮಾಡುವ ಯಾವುದೇ ಸೂಚನೆ ಕಂಡುಬರುತ್ತಿಲ್ಲ.

ಮಾರ್ಗಸೂಚಿಯೂ ಬೇಕು: ಈ ವೃತ್ತದಲ್ಲಿ ಮಾರ್ಗ ಸೂಚಿ ಫಲಕಗಳನ್ನೂ ಅಳವಡಿಸಬೇಕಿದೆ. ಹಾಸನ, ತುಮಕೂರು, ಬೆಂಗಳೂರು ಕಡೆಗೆ ಸಾಗುವ ರಸ್ತೆಗಳ ಮಾರ್ಗಸೂಚಿ ಲಕಗಳಿಲ್ಲದೆ ಪರದಾಡುವಂತಾಗಿದೆ. ಹೊಸದಾಗಿ ಬರುವ ಚಾಲಕರಿಗೆ ಯಾವ ರಸ್ತೆ ಯಾವ ಕಡೆಗೆ ಹೋಗುತ್ತದೆ ಎಂದು ತಿಳಿಯದೇ ಗೊಂದಲಕ್ಕೀಡಾಗುತ್ತಿದ್ದಾರೆ. ರಾತ್ರಿ ವೇಳೆ ದಾರಿ ತಿಳಿಯದೇ ನಾಲ್ಕಾರು ಕಿ.ಮೀ.ಸಾಗಿ ಮತ್ತೆ ವಾಪಾಸ್ ಬಂದು ದಾರಿ ಹುಡುಕಿಕೊಂಡು ಹೋದವರು ಇದ್ದಾರೆ.


ಕೆಂಪೇಗೌಡ ವೃತ್ತದಲ್ಲಿ ಶಾಲಾ ಮಕ್ಕಳು ಸೈಕಲ್, ಆಟೋಗಳ ಮೂಲಕ ಸಂಚರಿಸುತ್ತಾರೆ. ಜತೆಗೆ ಮಹಿಳೆಯರು, ಹಿರಿಯ ನಾಗರಿಕರು ನಡೆದೇ ಸಾಗುತ್ತಿರುತ್ತಾರೆ. ಸಿಗ್ನಲ್ ಇಲ್ಲದೆ ಯಾವ ಕಡೆಯಿಂದ ಯಾವ ವಾಹನಗಳು ಬರುತ್ತವೆ ಎಂಬ ಆತಂಕದಿಂದ ಜೀವ ಭಯದಲ್ಲಿ ರಸ್ತೆಗಳನ್ನು ದಾಟಬೇಕಾದ ಸ್ಥಿತಿ ಇದೆ.

ಎನ್.ಗಣೇಶ್, ನಗರಸಭೆ ಸದಸ್ಯ

ರಾಷ್ಟ್ರೀಯ ಹೆದ್ದಾರಿಯ ಕೆಂಪೇಗೌಡ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆಯೆಂದು ಸಾರ್ವಜನಿಕರು ಮನವಿ ಮಾಡಿದ್ದು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಅದಷ್ಟು ಬೇಗ ಸಿಗ್ನಲ್ ದೀಪಗಳ ಆರಂಭ ಕುರಿತು ಕ್ರಮ ಕೈಗೊಳ್ಳಲಾಗುವುದು.

ಮಲ್ಲಿಕಾರ್ಜುನ ಬಾಲದಂಡಿ ಎಸ್‌ಪಿ, ಬೆಂಗಳೂರು ಗ್ರಾಮಾಂತರ