ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣ ಬಳಿಯಿರುವ ಪ್ರಯಾಣಿಕರ ತಂಗುದಾಣ ತೆರವುಗೊಳಿಸುವಂತೆ ಸಂಚಾರಿ ಪೊಲೀಸರ ಸೂಚನೆ ನೀಡಿದ ಬೆನ್ನಲ್ಲೇ ಪುರಸಭೆಯ ಕೌನ್ಸಿಲ್ ಹಸಿರು ನಿಶಾನೆ ತೋರಿ ತಿಂಗಳು ನಾಲ್ಕು ಉರುಳಿದರೂ ಇನ್ನೂ ತೆರವಾಗಿಲ್ಲ.
ಪುರಸಭೆಯ ಸಾಮಾನ್ಯ ಸಭೆಯಲ್ಲಿಯೂ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡಿದ್ದರೂ ಕಡೆಗಣಿಸಲಾಗಿದೆ. ಬಿ.ಸಿ.ರೋಡಿನ ಬಸ್ ನಿಲ್ದಾಣ ಬಳಿ, ಶ್ರೀನಿವಾಸ್ ಆರ್ಕೇಡ್ ಮುಂಭಾಗದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿರುವ ತಂಗುದಾಣದಿಂದಾಗಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಬಸ್‌ಗಳು, ಇತರ ವಾಹನಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಕ್ಕಾಗಿ ದೀರ್ಘ ಅವಧಿಗೆ ನಿಲುಗಡೆಗೊಳಿಸುವುದರಿಂದ ಟ್ರಾಫಿಕ್ ಸಮಸ್ಯೆಯೂ ಉಂಟಾಗುತ್ತಿದೆ. ಜತೆಗೆ ರಿಕ್ಷಾಗಳೂ ತಂಗುದಾಣದ ಮುಂದೆಯೇ ಠಿಕಾಣಿ ಹೂಡುವುದರಿಂದ ತೊಂದರೆಯಾಗುತ್ತಿದೆ. ಮೇ ತಿಂಗಳಿನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಂಟ್ವಾಳ ಟ್ರಾಫಿಕ್ ಪೊಲೀಸರು ಖುದ್ದು ಉಪಸ್ಥಿತರಿದ್ದು ಈ ವಿಚಾರ ಪ್ರಸ್ತಾಪಿಸಿದ್ದರು.
ಜನಪ್ರತಿನಿಧಿಗಳ ಸೂಚನೆಗೂ ಕಿಮ್ಮತ್ತಿಲ್ಲ: ಸಂಚಾರಿ ಪೊಲೀಸರು ಬಸ್ ತಂಗುದಾಣ ತೆರವುಗೊಳಿಸುವಂತೆ ಲಿಖಿತ ರೂಪದಲ್ಲಿ ಮನವಿ ನೀಡಿದ್ದು, ಈ ಕುರಿತು ಸಾಮಾನ್ಯ ಸಭೆಯಲ್ಲಿ ಮುನ್ನೆಲೆಗೆ ಬಂದಿತ್ತು. ಉಪಾಧ್ಯಕ್ಷ ಮೊನೀಶ್ ಆಲಿ ಕೂಡ ಬಸ್ ತಂಗುದಾಣ ವಿಚಾರವನ್ನು ಬೆಂಬಲಿಸಿದ್ದು, ತೆರವುಗೊಳಿಸುವಂತೆ ಒತ್ತಾಯಿಸಿದ್ದರು. ಕೌನ್ಸಿಲ್ ಕೂಡ ಈ ಪ್ರಸ್ತಾಪಕ್ಕೆ ಸಹಮತ ನೀಡಿದ್ದು, ತೆರವುಗೊಳಿಸುವುದಕ್ಕಾಗಿ ಎಲ್ಲ ಸದಸ್ಯರ ಸಮ್ಮತಿಯೂ ದೊರೆತಿತ್ತು. ಬಸ್ ತಂಗುದಾಣ ತೆರವು ಕುರಿತು ಸರ್ವ ಸಮ್ಮತಿ ದೊರೆತು ತಿಂಗಳು ನಾಲ್ಕು ಉರುಳಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಜನಪ್ರತಿನಿಧಿಗಳು ನೀಡಿದ ಸೂಚನೆಯನ್ನು ಅಧಿಕಾರಿಗಳು ಪಾಲಿಸದೇ ಇದ್ದು, ಪಾಲನೆಯಾಗದ ನಿರ್ಣಯಗಳ ಪಟ್ಟಿಗೆ ಇದೂ ಸೇರ್ಪಡೆಯಾಗಿದೆ.
ಇಲ್ಲಿ ಪ್ರಯಾಣಿಕರ ಶೆಲ್ಟರ್ ನಿರ್ಮಿಸಿದ ಜಾಹೀರಾತು ಸಂಸ್ಥೆಯವರೇ ಶೆಲ್ಟರ್ ಸ್ಥಳಾಂತರಿಸಲು ಸಮಯವಕಾಶ ಕೇಳಿದ್ದಾರೆ. ಹಾಗಾಗಿ ಸಮಯವಕಾಶ ನೀಡಿದ್ದು ಶೀಘ್ರದಲ್ಲಿ ತೆರವಾಗಲಿದೆ. ಮತ್ತಡಿ ಮುಖ್ಯಾಧಿಕಾರಿ ಬಂಟ್ವಾಳ ಪುರಸಭೆ https://www.vijayavani.net/biker-injured-in-rickshaw-collision https://www.vijayavani.net/puttur-temple-7