ಜಿಲ್ಲೆ

5 ಹೊಸ ಟ್ರಾಫಿಕ್ ಠಾಣೆ: ಸಂಚಾರ ದಟ್ಟಣೆ ತಗ್ಗಿಸಲು ತಂತ್ರಜ್ಞಾನ ಬಳಸಿಕೊಳ್ಳುವುದಾಗಿ ಸಿಎಂ ಬೊಮ್ಮಾಯಿ ಹೇಳಿಕೆ

ಬೆಂಗಳೂರು: ನಗರದ ಸಂಚಾರ ದಟ್ಟಣೆ ನಿರ್ವಹಣೆ ಮತ್ತು ಸಂಚಾರ ನಿಯಮ ಉಲ್ಲಂಘನೆಯಲ್ಲಿ ಪಾರದರ್ಶಕತೆ ತರಲು ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವಾಜಿನಗರ ಬ್ರಾಡ್‌ವೇ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಪೂರ್ವ ವಿಭಾಗ ಡಿಸಿಪಿ ಕಚೇರಿಯ ನೂತನ ಕಟ್ಟಡ ಮತ್ತು ಇಂಟಿಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ವಿಭಾಗಕ್ಕೆ ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು.

ಆನಂತರ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ನಿವಾರಿಸಲು ವಿಶೇಷ ಕಮಿಷನರ್ ಆಗಿ ಎಡಿಜಿಪಿ ಡಾ.ಎಂ.ಎ. ಸಲೀಂ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಬೆಳ್ಳಂದೂರು, ಹೆಣ್ಣೂರು, ಮಹದೇವಪುರ, ತಲಘಟ್ಟಪುರ, ಬ್ಯಾಡರಹಳ್ಳಿಯಲ್ಲಿ ಹೊಸ ಸಂಚಾರ ಠಾಣೆ ತೆರೆಯಲು ಒಪ್ಪಿಗೆ ಸೂಚಿಸಲಾಗಿದೆ. ನಗರದ ಹೊರಭಾಗದಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ.

ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಚಾಲಕ, ಸವಾರರಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಸಂಪೂರ್ಣ ತಂತ್ರಜ್ಞಾನ ಬಳಸಿ ಕಾರ್ಯರೂಪಕ್ಕೆ ತರಲಾಗುತ್ತದೆ. ನಗರದ 300 ಕಡೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಾಂಶ ಒಳಗೊಂಡ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಸ್ವಯಂ ಚಾಲಿತವಾಗಿ ವಾಹನದ ನಂಬರ್ ಪ್ಲೇಟ್ ೆಟೋ ತೆಗೆದು ದಂಡ ವಿಧಿಸಿ ಇ-ಚಲನ್ ಮೊಬೈಲ್‌ಗೆ ಕಳುಹಿಸಲಿದೆ. ಇದರಿಂದ ಟ್ರಾಫಿಕ್ ೈನ್ ಸಂಗ್ರಹದಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಪೊಲೀಸರೊಂದಿಗೂ ಕಿರಿಕಿರಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮತ್ತೊಂದು ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ, ಶೇಷಾದ್ರಿಪುರ, ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆ, ಹೈಗ್ರೌಂಡ್ಸ್ ಠಾಣೆಗೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ. ಕೆ. ಸುಧಾಕರ್, ಡಾ. ಸಿ.ಎನ್.ಅಶ್ವತ್ಥ್ ನಾರಾಯಣ, ಡಿಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಜಂಟಿ ಪೊಲೀಸ್ ಆಯುಕ್ತ ಎಂ.ಎ. ಅನುಚೇತ್ ಉಪಸ್ಥಿತರಿದ್ದರು.

50 ಸಾವಿರ ಕೇಸ್ :

ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ವಿರುದ್ಧ 22 ಸಾವಿರ ಕೇಸ್ ದಾಖಲು ಮಾಡಲಾಗುತ್ತಿದೆ. ಇದೀಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಒಳಗೊಂಡ 250 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾಗಳು ಮತ್ತು 80 ರೆಡ್‌ಲೈಟ್ ವಯೋಲೇಷನ್ ಡಿಟೆಕ್ಷನ್ ಕ್ಯಾಮರಾಗಳ ಸಹಾಯದಿಂದ 50 ಸಾವಿರ ಕೇಸ್ ದಾಖಲು ಮಾಡಲು ಸಾಧ್ಯವಾಗುತ್ತದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಡಾ.ಎಂ.ಸಲೀಂ ತಿಳಿಸಿದ್ದಾರೆ. ಆದರೆ, ದಂಡ ವಿಧಿಸುವುದೇ ನಮ್ಮ ಉದ್ದೇಶ ಅಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ದಂಡ ವಿಧಿಸುವುದರಿಂದ ವಾಹನ ಸವಾರ,ಚಾಲಕರನ್ನು ಜಾಗೃತಿ ಮೂಡಿ ನಿಯಮ ಉಲ್ಲಂಘನೆ ಕಡಿಮೆ ಆಗಲಿದೆ. ಪರಿಣಾಮ ಸಂಚಾರ ನಿಯಮ ಪಾಲನೆ ಹೆಚ್ಚಾಗಿ ಅನಾಹುತ ತಪ್ಪಲಿದೆ ಎಂದು ಸಲೀಂ ಭರವಸೆ ನೀಡಿದರು.