ಜಿಲ್ಲೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಪ್ರಾಣಕ್ಕೆ ಸಂಚಕಾರ - ಸುರತ್ಕಲ್ -ನಂತೂರು ನಡುವೆ ಅಲ್ಲಲ್ಲಿ ಗುಂಡಿ - ನವೀಕರಣ ಕಾಮಗಾರಿ ಸ್ಥಗಿತ

ಮಂಗಳೂರು : ಮಳೆಗಾಲದ ಆರಂಭದಲ್ಲೇ ರಾಷ್ಟ್ರೀಯ ಹೆದ್ದಾರಿ ಎಕ್ಕುಟ್ಟಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಿಂದ ನಂತೂರು ನಡುವೆ ಸಂಚರಿಸುವುವವರು ಪ್ರಾಣ ಕೈಯ್ಯಲ್ಲಿ ಹಿಡಿದುಕೊಳ್ಳಬೇಕಾದ ಸ್ಥಿತಿ. ಅಲ್ಲಲ್ಲಿ ಗುಂಡಿಗಳಾಗಿ ದ್ವಿಚಕ್ರ ವಾಹನ ಸವಾರರಿಗಂತೂ ಪ್ರಾಣಕ್ಕೆ ಸಂಚಕಾರವಾಗಿ ಪರಿಣಮಿಸಿದೆ.

ಸುರತ್ಕಲ್ ಪೇಟೆ, ಕೂಳೂರು ಸೇತುವೆ, ಕೂಳೂರು ಸರ್ವಿಸ್ ರಸ್ತೆ, ಕುಂಟಿಕಾನ ಹೆದ್ದಾರಿ, ಮೊದಲಾದ ಕಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳಾಗಿವೆ. ಮಳೆ ಬರುವಾಗ ನೀರು ನಿಂತರೆ ಹೊಂಡ ಗಮನಕ್ಕೆ ಬರುವುದಿಲ್ಲ. ಕೆಲವು ಕಡೆ ಬೀದಿ ದೀಪವೂ ಉರಿಯುವುದಿಲ್ಲ. ರಾತ್ರಿ ವೇಳೆ ದ್ವಿಚಕ್ರ ವಾಹನ ಗುಂಡಿಗಳಿಗೆ ಬಿದ್ದರೆ ಸವಾರ ರಸ್ತೆಗೆ ಬೀಳುವುದು ಖಚಿತ. ಹಿಂದಿನಿಂದ ಘನ ವಾಹನಗಳು ಬರುತ್ತಿದ್ದರೆ ಅದರ ಅಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿರುವಾಗ ಅತಿ ವೇಗದಿಂದ ಹಿಂದಿನಿಂದ ಬರುವ ಎಕ್ಸ್‌ಪ್ರಸ್ ಬಸ್‌ಗಳು ಏಕಾಏಕಿ ಕರ್ಕಶ ಹಾರ್ನ್ ಹಾಕುವುದರಿಂದ ಕೆಲವೊಮ್ಮೆ ಅದಕ್ಕೆ ಬೆಚ್ಚಿಬಿದ್ದು, ದ್ವಿಚಕ್ರ ಸವಾರರು ಬದಿಗೆ ಹೋದರೆ ನಿಯಂತ್ರಣ ತಪ್ಪಿ ಹೊಂಡಕ್ಕೆ ಬೀಳುವ ಸಾಧ್ಯತೆ ಇದೆ. ಭಯದ ವಾತಾವರಣದಲ್ಲೇ ವಾಹನ ಚಲಾಯಿಸಿಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿದೆ. ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ.

ಓವರ್ ಲೇ ಕಾಮಗಾರಿ ಸ್ಥಗಿತ: ಸುರತ್ಕಲ್-ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿ ನವೀಕರಣ ಮಾಡುವ ಓವರ್ ಲೇ ಕಾಮಗಾರಿಗೆ ಅವಧಿಗೆ ಮುಂಚಿತವಾಗಿ ಸುರಿದ ಮಳೆಯಿಂದ ವಿಘ್ನ ಎದುರಾಗಿದೆ. ಈ ಕಾಮಗಾರಿಗಾಗಿ ಮೇಲ್ಪದರ ಕೆತ್ತಿದ ಜಾಗದಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಸುರತ್ಕಲ್-ನಂತೂರು, ನಂತೂರು ಜಂಕ್ಷನ್‌ನಿಂದ ಪಡೀಲ್ ಬೈಪಾಸ್, ಬಿಸಿರೋಡ್-ಪಡೀಲ್ ಹೀಗೆ ಮೂರು ಹಂತಗಳಲ್ಲಿ ಒಟ್ಟು 37.42 ಕಿ.ಮೀ. ಹೆದ್ದಾರಿಗಳ ರಿಪೇರಿ, ಮರುಡಾಮರು ಕಾಮಗಾರಿ, ನಿರ್ವಹಣೆ ಕಾಮಗಾರಿ 28.58 ಕೋ.ರೂ. ವೆಚ್ಚದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕಾಮಗಾರಿ ಆರಂಭಗೊಂಡು ಕೆಲವೇ ವಾರಗಳಲ್ಲಿ ಮಳೆ ಸುರಿಯಲು ಆರಂಭವಾದ ಕಾರಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಕಾಮಗಾರಿಗೆ ಮೇಲ್ಪದರ ಕೆತ್ತಿದ ಸ್ಥಳದಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ.

ಒಳ ರಸ್ತೆಗಳೂ ಶೋಚನೀಯ: ಮಳೆಯ ಸಂದರ್ಭ ನಗರದ ಒಳ ರಸ್ತೆಗಳಲ್ಲಿ ಗುಂಡಿಗಳಿಂದ ಸಮಸ್ಯೆಯಾಗುತ್ತಿದೆ. ಕೆಲವು ಕಡೆ ಅರೆ ಬರೆ ಕಾಮಗಾರಿಗಳಿಂದಲೂ ರಸ್ತೆಯಲ್ಲಿ ಹೊಂಡಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕಾಗುತ್ತಿದೆ. ಪಂಪ್‌ವೆಲ್‌ನಿಂದ ನಗರಕ್ಕೆ ಬರುವ ರಸ್ತೆ ಕಂಕನಾಡಿಯ ತನಕ ರಸ್ತೆ ಗುಂಡಿಯಿಂದ ಕೂಡಿದೆ.

ದ್ವಿಚಕ್ರ ಸವಾರರು ಮುನ್ನೆಚ್ಚರಿಕೆ ವಹಿಸಿ

ಮಳೆಗಾಲದಲ್ಲಿ ಅದರಲ್ಲೂ ದ್ವಿಚಕ್ರ ವಾಹನ ಚಾಲನೆ ಸಂದರ್ಭ ಸವಾರರು ಬಹಳಷ್ಟು ಎಚ್ಚರಿಕೆ ವಹಿಸಬೇಕು. ಕಳೆದ ವರ್ಷ ಹಲವು ಮಂದಿ ಗುಂಡಿಗಳಿಗೆ ಸಿಲುಕಿ ಅಪಘಾತ ನಡೆದು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ. ಕೂಳೂರು ಸರ್ವಿಸ್ ರಸ್ತೆ ಹದಗೆಟ್ಟಿದೆ. ಇಲ್ಲಿ ಸರ್ವಿಸ್ ರಸ್ತೆಯಲ್ಲಿ ಬಂದವರು ಮುಖ್ಯ ರಸ್ತೆಗೆ ಸೇರುವಲ್ಲಿ ಬೃಹತ್ ಗಾತ್ರದ ಹೊಂಡಗಳಾಗಿವೆ.

ರಾಷ್ಟ್ರೀಯ ಹೆದ್ದಾರಿ ನವೀಕರಣ ಕಾಮಗಾರಿಗೆ ಅನುಮೋದನೆ ಸಿಗುವಾಗ ತಡವಾದ ಕಾರಣ ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಆರಂಭಿಸಲಾಗಿತ್ತು. ಮಳೆಗಾಲ ಬೇಗ ಆರಂಭಗೊಂಡ ಕಾರಣ ಕೆಲಸ ಸ್ಥಗಿತಗೊಂಡಿದೆ. ಜೂನ್‌ನಲ್ಲಿ ಬಿಸಿಲು ಬಂದರೆ ಕಾಮಗಾರಿ ಮುಂದುವರಿಸಲಾಗುವುದು.

ಅಬ್ದುಲ್ಲ ಜಾವೇದ್ ಅಜ್ಮಿ

ಯೋಜನಾ ನಿರ್ದೇಶಕ, ಎನ್‌ಎಚ್‌ಎಐ