ಜಿಲ್ಲೆ

ಕಾರ್ಕಳ- ಮಾಳ ಸಂಪರ್ಕಿಸುವ ಚತುಷ್ಪಥ ಹೈವೇ ಸಂಚಾರ ಅಸ್ತವ್ಯಸ್ತ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಾರ್ಕಳದಿಂದ ಮಾಳ ತನಕದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಗೊಂಡು ವರ್ಷ ಮೂರು ಉರುಳಿದರೂ ಆಮೆಗತಿಯಲ್ಲೇ ಸಾಗುತ್ತಿದ್ದು, ವಾಹನ ಸವಾರರ ಸಂಕಷ್ಟಕ್ಕೆ ಮುಕ್ತಿ ದೊರೆಯುವುದು ಸಂಶಯವೆನ್ನಿಸಿದೆ. ಜತೆಗೆ ರಸ್ತೆಯ ಅರಿವಿರದ ವಾಹನಗಳು ಅತಿವೇಗವಾಗಿ ಸಂಚರಿಸಿ ಅವಘಡಗಳಿಗೆ ತುತ್ತಾಗುತ್ತಿವೆ.

ಕಾರ್ಕಳದಿಂದ ಮಾಳ ತನಕ ಸುಮಾರು 15.2 ಕಿಲೋ ಮೀಟರ್ ಉದ್ದದ ಈ ರಸ್ತೆಯಲ್ಲಿ ಕೇವಲ 11 ಕಿ.ಮೀ. ಮಾತ್ರ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ಅಪೂರ್ಣ ಕಾಮಗಾರಿಯಿಂದ ವಾಹನ ಸವಾರರು ಶಪಿಸಿಕೊಂಡೇ ಸಂಚರಿಸುವುದು ಮಾಮೂಲಾಗಿದೆ. ಜತೆಗೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಹಲವೆಡೆ ಹೊಂಡಗಳು ನಿರ್ಮಾಣವಾಗಿ ಸಂಚಾರ ಕಷ್ಟಕರವಾಗಿದೆ.

ಸಂಚಾರದಲ್ಲಿ ಗೊಂದಲ: ಸ್ಥಳೀಯ ವಾಹನಗಳ ಜತೆಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಪ್ರವಾಸಿಗರು ಶೃಂಗೇರಿ ಹಾಗೂ ಹೊರನಾಡು ಸಹಿತ ಮಲೆನಾಡ ಸೌಂದರ್ಯ ವೀಕ್ಷಿಸಲು ಈ ಮಾರ್ಗವನ್ನೇ ಹೆಚ್ಚು ಬಳಸುತ್ತಾರೆ. ರಸ್ತೆಯ ಕುರಿತು ಅರಿವು ಇರದೇ ವೇಗವಾಗಿ ಸಂಚರಿಸಿ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಸುಮಾರು 4 ಕಿ.ಮೀ ಕಾಮಗಾರಿ ಇನ್ನೂ ಬಾಕಿ ಇದ್ದು, ವಾಹನ ಸಂಚಾರಕ್ಕೂ ಯೋಗ್ಯವಾಗಿಲ್ಲ. ಭಾರಿ ಹೊಂಡಗಳಿರುವುದರಿಂದ ವಾಹನಗಳು ಹರಸಾಹಸಪಟ್ಟು ಸಂಚರಿಸುತ್ತಿದ್ದು, ಡೈವರ್ಶನ್ ತೆಗೆದುಕೊಳ್ಳುವ ಸಂದರ್ಭ ಸೂಕ್ತ ಸೂಚನಾ ಫಲಕಗಳಿಲ್ಲದೇ ಗೊಂದಲವಾಗುತ್ತಿದೆ.

ರಾತ್ರಿ ಸಂಚಾರ ಎಚ್ಚರ

ಬಹುತೇಕ ಕಡೆಗಳಲ್ಲಿ ಹೆದ್ದಾರಿ ಕಾಮಗಾರಿ ಅರ್ಧಂಬರ್ಧವಾಗಿದ್ದು, ಅವೈಜ್ಞಾನಿಕವಾಗಿ ಹಲವೆಡೆ ಡೈವರ್ಶನ್ ನೀಡಲಾಗಿದೆ. ಕೆಲವೆಡೆ ಸೂಚನಾ ಫಲಕಗಳಿದ್ದು, ಇನ್ನೂ ಕೆಲವೆಡೆ ಡೈವರ್ಶನ್ ಇರುವುದು ಚಾಲಕರಿಗೆ ಗೋಚರಿಸುವುದಿಲ್ಲ. ಇದು ಅಪಘಾತಗಳಿಗೆ ಕಾರಣವಾಗುತ್ತಿದ್ದು, ರಾತ್ರಿ ವೇಳೆ ಅವಘಡಗಳ ಸಂಖ್ಯೆ ಹೆಚ್ಚುತ್ತಿದೆ.

ಮಳೆಗಾಲದ ಬಳಿಕ ಕಾಮಗಾರಿ

ಹೆದ್ದಾರಿಯಲ್ಲಿ ಹೊಂಡಗಳಿರುವಲ್ಲೆಲ್ಲ ತಾತ್ಕಾಲಿಕ ಕಾಮಗಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಪ್ರತಿಕ್ರಿಯಿಸಿದ್ದು, ಮಳೆಗಾಲ ಮುಗಿದ ಬೆನ್ನಲ್ಲೇ ಕಾಮಗಾರಿಗಳನ್ನು ಮರುಆರಂಭಿಸಿ ಶೀಘ್ರವೇ ಜನಬಳಕೆಗೆ ನೀಡಲಾಗುವುದು ಎಂದು ಭರವಸೆ ನೀಡಿದೆ.

ವಿಳಂಬಕ್ಕೆ ಕಾರಣವೇನು?

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 2022ರಲ್ಲಿ 177.94 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ಸಿಕ್ಕಿತು. ಸಾಣೂರು ಪುಲ್ಕೇರಿ ಜಂಕ್ಷನ್‌ನಿಂದ ಮಾಳ ಫಾರೆಸ್ಟ್ ಗೇಟ್ ತನಕ ರಸ್ತೆ ಕಾಮಗಾರಿ ನಡೆದಿದ್ದು, ಭೂಸ್ವಾಧೀನ ಪ್ರಕ್ರಿಯೆಯ ವಿಳಂಬವೇ ಕಾಮಗಾರಿಯ ನಿಧಾನಗತಿಗೆ ಪ್ರಮುಖ ಕಾರಣವಾಗಿದೆ. ಕೆಲವೆಡೆ ಭೂ ಸ್ವಾಧೀನಗೊಳಿಸಿ ಕಾಮಗಾರಿ ನಡೆಸಿದ್ದು, ಇನ್ನೂ ಬಹುತೇಕ ಕಡೆ ಭೂಸ್ವಾಧೀನ ಆರಂಭಗೊಂಡಿಲ್ಲ. ಜತೆಗೆ ಕಾನೂನು ತೊಡಕುಗಳಿರುವುದೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

ಶೀಘ್ರವೇ ಹೊಸ ಅಧಿಸೂಚನೆ

ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಅಪೂರ್ಣವಾಗಿದ್ದು, 280 ಆಸ್ತಿಗಳ ಪೈಕಿ ಶೇ.60ರಷ್ಟು ಮಾತ್ರ ಪೂರ್ಣಗೊಂಡಿದೆ. ಉಳಿದ 120 ಆಸ್ತಿಗಳ ಭೂಸ್ವಾಧೀನಕ್ಕೆ ಶೀಘ್ರವೇ ಮತ್ತೊಂದು ಅಧಿಸೂಚನೆ ಹೊರಡುವ ಸಾಧ್ಯತೆಯಿದ್ದು, ಎಡಿಎಲ್‌ಆರ್ ನಕ್ಷೆ ತಯಾರಿಸುವ ಕಾರ್ಯ ಮುಂದುವರಿದಿದೆ.

ಮೂರು ವರ್ಷಗಳಿಂದಲೂ ಕಾಮಗಾರಿಯ ಸ್ಥಿತಿಗತಿ ನಿಂತ ನೀರಿನಂತಿದೆ. ಕಾರ್ಕಳ-ಮಾಳ ಜನರು ಸಮಸ್ಯೆಗಳ ನಿವಾರಣೆಗೊಳ್ಳುವ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿದರೆ ಸಾಕಷ್ಟು ಜನರ ಸಂಕಷ್ಟ ಕೊನೆಯಾಗಲಿದೆ. -ಅವಿನಾಶ್, ಸ್ಥಳೀಯರು. ಕೆಲವೊಂದು ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿ, ಅಲ್ಲಲ್ಲಿ ಡೈವರ್ಶನ್‌ಗಳನ್ನು ನೀಡಿದ್ದು ಅವೈಜ್ಞಾನಿಕವಾಗಿದೆ. ಸೂಚನೆಗಳಿಲ್ಲದೆ ವಾಹನಗಳು ಎದುರು ಬದುರುಗೊಳ್ಳುವ ಮೂಲಕ ಅಪಘಾತಕ್ಕೂ ಕಾರಣವಾಗುತ್ತಿದೆ. ನಿತ್ಯ ಈ ಭಾಗದಲ್ಲಿ ವಾಹನ ಸವಾರಾರು ಎಡವಟ್ಟು ಮಾಡಿಕೊಳ್ಳುವಂತಾಗಿದೆ. -ಸುರೇಂದ್ರ ಕುಮಾರ್, ವಾಹನ ಸವಾರ. https://www.vijayavani.net/lokayukta-officials-pay-surprise-visit-to-karkala-municipality https://www.vijayavani.net/social-work-through-rural-development-project