ಜಿಲ್ಲೆ

ರಾಜ್ಯ ಹೆದ್ದಾರಿ ಸಂಚಾರ ತಡೆ ಮಾ. 3ರಂದು

ಸಂಶಿ: ಗ್ರಾಮದಲ್ಲಿ ಸರ್ಕಾರಿ ಐಟಿಐ ಕಾಲೇಜ್, ನೀಲಮ್ಮ ಅಕ್ಕಿಯವರ ಸರ್ಕಾರಿ ಪ್ರೌಢ ಶಾಲೆಗೆ ಕೊಠಡಿಗಳ ಕೊರತೆ, ರೈತರಿಗೆ ಜಮೀನಿಗೆ ತೆರಳಲು ರಸ್ತೆ ನಿರ್ಮಾಣ ಸೇರಿ ವಿವಿಧ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಮಾ. 3ರಂದು ಹುಬ್ಬಳ್ಳಿ-ಲಕ್ಷೆ್ಮೕಶ್ವರ ರಾಜ್ಯ ಹೆದ್ದಾರಿ ಸಂಚಾರ ತಡೆ ನಡೆಸಲಾಗುವುದು ಎಂದು ನಿವೃತ್ತ ಶಿಕ್ಷಕ ಎನ್.ಎಫ್. ನದಾಫ ತಿಳಿಸಿದ್ದಾರೆ.

ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸರ್ಕಾರಿ ಐಟಿಐ ಕಾಲೇಜ್ ಮಂಜೂರಾಗಿ ಖಾಸಗಿ ಗೋದಾಮಿನಲ್ಲಿ ತರಗತಿ ನಡೆಯುತ್ತಿವೆ. ನಿವೃತ್ತ ಶಿಕ್ಷಕ ಎನ್.ಎಫ್. ನದಾಫ್ ಅವರು 20 ಗುಂಟೆ ಜಾಗ ಖರೀದಿ ಪತ್ರ ಮಾಡಿಸಿ ಕೊಟ್ಟಿದ್ದರೂ ಕಾಲೇಜು ಕಟ್ಟಡಕ್ಕೆ ಅನುದಾನ ನೀಡದ್ದರಿಂದ ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಈ ಕುರಿತು ಸಂಬಂಧಿಸಿದವರಿಗೆ ಗ್ರಾಮಸ್ಥರು ಮನವಿ ಕೊಟ್ಟರೂ ಇಲಾಖೆಯವರು ಸ್ಪಂದಿಸುತ್ತಿಲ್ಲ ಎಂದು ದೂರಿದರು. ರೈಲ್ವೆ ಬ್ರಿಜ್ ಸಮಸ್ಯೆ, ಬಸ್ ಸಂಪರ್ಕ ಅವ್ಯವಸ್ಥೆ, ಸಂಶಿ ನಿಲ್ದಾಣದಲ್ಲಿ ವೇಗದೂತ ರೈಲು ನಿಲುಗಡೆ, ಎಪಿಎಂಸಿ ಗೋದಾಮು ರಸ್ತೆ ಇಲ್ಲದಿರುವುದು ಸೇರಿ ಹತ್ತಾರು ಸಮಸ್ಯೆಗಳನ್ನು ಪರಿಹರಿಸಬೇಕು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಶಾಸಕ ಎಂ.ಆರ್. ಪಾಟೀಲ ಹಾಗೂ ಸಂಬಂಧಿಸಿದ ಸಚಿವರಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸದ್ದರಿಂದ ರಾಜ್ಯ ಹೆದ್ದಾರಿ ತಡೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಎ.ಬಿ. ಉಪ್ಪಿನ ಮಾತನಾಡಿ, ನೀಲಮ್ಮ ಅಕ್ಕಿಯವರ ಸರ್ಕಾರಿ ಪ್ರೌಢ ಶಾಲೆಗೆ ಕೊಠಡಿಗಳ ಕೊರತೆಯಿದ್ದು, ಮಕ್ಕಳು ಹೊರಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ವಣವಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರೌಢ ಶಾಲೆಗೆ ತೆರಳಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಈ ಪ್ರೌಢ ಶಾಲೆಯನ್ನು ಪಬ್ಲಿಕ್ ಶಾಲೆಯನ್ನಾಗಿಸಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಉಪತಹಸೀಲ್ದಾರ್ ಲಕ್ಷ್ಮಣ ದೊಡ್ಡಮನಿ ಮಾತನಾಡಿ, ಹಲವು ದಿನಗಳಿಂದ ಪಾಳು ಬಿದ್ದಿರುವ ಎಪಿಎಂಸಿಯನ್ನು ಸರಿಪಡಿಸಬೇಕು. ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ರೈತ ಮುಖಂಡರಾದ ಪರಮೇಶಪ್ಪ ನಾಯ್ಕರ ಮಾತನಾಡಿದರು. ಎ.ಬಿ. ಉಪ್ಪಿನ, ವಿ.ಡಿ. ಅಕ್ಕಿ, ವಿದ್ಯಾಧರ ಸುಂಕದ, ಯಲ್ಲಪ್ಪ ಮುಳಗುಂದ. ವಿ.ಡಿ. ಸುಂಕದ, ಲೋಕೇಶ ಸರಾಸರಿ, ಲಾಲಸಾಬ್ ಕಣವಿ, ಪರಸಪ್ಪ ಮಾಯಣ್ಣವರ, ಈರಪ್ಪ ರಾಟಿ, ಅನಿಂಸಾಬ್ ಗೋಕಾವಿ ಸುದ್ದಿಗೋಷ್ಠಿಯಲ್ಲಿದ್ದರು.