ಜಿಲ್ಲೆ

ಉಪ್ಪಿನಂಗಡಿಯಲ್ಲಿ ವಾಹನ ಸಂಚಾರ ಸ್ಥಗಿತ

ಸೌಮ್ಯ ಆರ್

ಉಪ್ಪಿನಂಗಡಿ: ಬರೋಬ್ಬರಿ ಎರಡು ತಾಸು ವಾಹನ ದಟ್ಟಣೆಯುಂಟಾಗಿ ಉಪ್ಪಿನಂಗಡಿಯಲ್ಲಿ ವಾಹನ ಸಂಚಾರ ತ್ರಾಸದಾಯಕವೆನಿಸಿದ ಘಟನೆ ಭಾನುವಾರ ನಡೆದಿದೆ.

ಉಪ್ಪಿನಂಗಡಿ ಸನಿಹದ ಸಭಾಂಗಣದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಭಾರೀ ಸಂಖ್ಯೆ ಅತಿಥಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಉಂಟಾದ ವಾಹನ ದಟ್ಟಣೆ ಉಪ್ಪಿನಂಗಡಿ ಪೇಟೆಯುದ್ದಕ್ಕೂ ಪ್ರಸಹರಿಸಿ ಎರಡು ತಾಸು ಕಾಲ ಸುಗಮ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಇದರಿಂದಾಗಿ ಆಂಬುಲೆನ್ಸ್ ಸಂಚಾರ ದಿಗ್ಬಂಧಿಸಲ್ಪಟ್ಟಂತಾಗಿ ಅದರಲ್ಲಿನ ರೋಗಿಗಳು ಸಮಸ್ಯೆಗೆ ಸಿಲುಕುವಂತಾಯಿತು.

ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಪೇಟೆಗೆ ಪ್ರವೇಶಿಸುವುದು ಅಸಾಧ್ಯವಾಗಿ ಬಹುತೇಕ ಜಿಲ್ಲಾ ಕೇಂದ್ರಗಳ ನಡುವೆ ಸಂಚರಿಸುವ ಬಸ್ಸುಗಳು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬಾರದೇ ನೇರವಾಗಿ ಹೆದ್ದಾರಿಯಲ್ಲಿ ಸಂಚಾರ ಮುಂದುವರಿಸಿದವು. ಜಿಲ್ಲಾ ಕೇಂದ್ರಗಳಿಗೆ ಪ್ರಯಾಣಿಸುವ ಪ್ರಯಾಣಿಕರು ವಾಹನವನ್ನು ನಿರೀಕ್ಷಿಸಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದವರು ನಿಲ್ದಾಣಕ್ಕೆ ಬಸ್ಸುಗಳು ಬಾರದೇ ಸಮಸ್ಯೆಗೆ ತುತ್ತಾದರು.

ವಿವಾಹ ಕಾರ್ಯಕ್ರಮ ನಡೆಯುವ ಸಭಾಂಗಣದಲ್ಲಿ ಸಾಕಷ್ಟು ವಾಹನ ನಿಲುಗಡೆಗೆ ಸ್ಥಳಾವಕಾಶವಿದ್ದರೂ, ಅಲ್ಲಿನ ಸಾಮರ್ಥ್ಯಕ್ಕಿಂತ ಮಿಗಿಲಾಗಿ ವಾಹನಗಳು ಆಗಮಿಸಿದಾಗ ಪದೇ ಪದೆ ಸಮಸ್ಯೆ ಉದ್ಭವಿಸುತ್ತಿದ್ದು, ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಧೀರ್ಘ ಕಾಲ ಶ್ರಮಿಸಬೇಕಾಯಿತು. ಪೊಲೀಸರೊಂದಿಗೆ ಇಳಂತಿಲ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಗೌಡ, ಸ್ಥಳೀಯ ಆಟೋ ಚಾಲಕರು, ಮುಂದಕ್ಕೆ ಸಂಚರಿಸಲಾರದೆ ಒಳರಸ್ತೆಯಲ್ಲಿ ತಡೆಯಲ್ಪಟ್ಟ ಲಾರಿ ಚಾಲಕರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದ್ದದ್ದು ಕಂಡು ಬಂತು.