ಗೋಣಿಕೊಪ್ಪ: ಕೊಡಗು ಜಿಲ್ಲೆಯ ದಕ್ಷಿಣ ಭಾಗ ಕೇರಳ ರಾಜ್ಯದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಕೊಡಗಿನ ಕೊನೆಯ ಗ್ರಾಮವಾದ ಕುಟ್ಟದಿಂದ ಕೇರಳದ ಗಡಿ ಪ್ರದೇಶದವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ಸುಮಾರು 4 ಕಿಮೀ ರಸ್ತೆ ಹದಗೆಟ್ಟಿದ್ದು, ಇದು ಹೆದ್ದಾರಿ ಕೂಡ ಹೌದು. ನಿತ್ಯ ಈ ರಸ್ತೆಯಲ್ಲಿ ಕೇರಳದಿಂದ ಕೊಡಗಿಗೆ ಹಾಗೂ ಕೊಡಗಿನಿಂದ ಕೇರಳಕ್ಕೆ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಮಳೆ ಬಂತೆಂದರೆ ಗುಂಡಿಗಳು ಮಳೆ ನೀರಿನಿಂದ ತುಂಬಿ, ಅಪಾಯಕ್ಕೆ ಆಹ್ವಾನ ನೀಡಿದಂತಿರುತ್ತದೆ.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಗುರುವಾರ ಕುಟ್ಟದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಕುಟ್ಟದ ಜನಸ್ನೇಹಿ ಆಟೋ ಚಾಲಕರ ಸಂಘದ ಸದಸ್ಯರು ಪಾಲ್ಗೊಂಡು ಹದಗೆಟ್ಟ ರಸ್ತೆಯಿಂದ ಆಗುತ್ತಿರುವ ತೊಂದರೆಗಳ ಕುರಿತು ಬೆಳಕು ಚೆಲ್ಲಿದರು.
ನಿತ್ಯ ಈ ರಸ್ತೆಯಲ್ಲಿ ಜನರನ್ನು ಕರೆದುಕೊಂಡು ಹೋಗುವಾಗ ಆಟೋಗಳಿಗೆ ಹಾನಿಯಾಗುತ್ತಿರುವ ಹಲವಾರು ಘಟನೆಗಳು ನಡೆದಿದೆ. ಸ್ಥಳೀಯ ಆಡಳಿತ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಈ ಸಂಬಂಧ ಹಲವಾರು ಬಾರಿ ಮನವಿ ಮಾಡಿದರೂ ರಸ್ತೆಯ ಸ್ಥಿತಿ ಇನ್ನೂ ಹಾಗೆಯೇ ಇದೆ.
ಆಟೋಗಳು ಇಂತಹ ರಸ್ತೆಯಲ್ಲಿ ನಿತ್ಯ ಓಡಾಡುವುದರಿಂದ ಆಟೋಗಳು ದುರಸ್ತಿಗೀಡಾಗುತ್ತಿವೆ. ವಾಹನವನ್ನು ದುರಸ್ತಿಪಡಿಸಲು ಆಟೋ ಚಾಲಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ದುಡಿದ ದುಡ್ಡೆಲ್ಲ ಆಟೋ ರಿಪೇರಿಗೆ ಆಗುತ್ತಿದೆ. ಹಳ್ಳಿ ರಸ್ತೆಯಾದರೂ ಚೆನ್ನಾಗಿದೆ. ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಈ ರೀತಿಯಲ್ಲಿ ಇರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಎನ್ನುವುದು ಆಟೋ ಚಾಲಕರು ಅಳಲು ತೋಡಿಕೊಂಡರು.ಇನ್ನಾದರು ಸಂಬಂಧಿಸಿದವರು ಇತ್ತ ಗಮನ ಹರಿಸಿ ಹದಗೆಟ್ಟ ರಸ್ತೆಯನ್ನು ದುರಸ್ತಿಪಡಿಸಬೇಕೆಂದು ಮನವಿ ಮಾಡಿದರು.
ಕೊಚ್ಚಿ ಹೋದ ಮಣ್ಣು: ಮಳೆಗಾಲಕ್ಕೂ ಮುನ್ನ ಜನಸ್ನೇಹಿ ಆಟೋ ಚಾಲಕರ ಸಂಘದ ವತಿಯಿಂದ ಮಣ್ಣು ಹಾಕಿ ಗುಂಡಿ ಮುಚ್ಚುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ತಕ್ಕಮಟ್ಟಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ಮಳೆಗಾಲದಲ್ಲಿ ಹೆಚ್ಚು ಮಳೆ ಬಿದ್ದ ಕಾರಣ ಮಣ್ಣೆಲ್ಲ ಕೊಚ್ಚಿ ಹೋಗಿ ಮತ್ತೆ ಗುಂಡಿಗಳಲ್ಲಿ ನೀರು ತುಂಬಿದೆ.
ಪ್ರಾಯಾಸದಿಂದ ಸಾಗಬೇಕು
ಹಲವಾರು ವರ್ಷಗಳಿಂದ ಈ ಮಾರ್ಗದ ರಸ್ತೆ ತೀವ್ರ ಹದಗೆಟ್ಟಿದೆ. ಪರಿಣಾಮ ವಾಹನಗಳು ಓಡಾಡುವುದು ಕಷ್ಟಕರವಾಗಿದೆ. ಜತೆಗೆ ಪ್ರಯಾಸದಿಂದ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ವಯಸ್ಸಾದವರು, ಅನಾರೋಗ್ಯ ಪೀಡಿತರನ್ನು ಈ ರಸ್ತೆಯಲ್ಲಿ ಕರೆದುಕೊಂಡು ಹೋಗುವುದು ಕಷ್ಟದ ಕೆಲಸ. ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟವರು ಇತ್ತ ಗಮನಹರಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಿದರೆ ಒಳ್ಳೆಯದು.
ಬಿ.ಟಿ.ಲೋಕೇಶ್ ಆಟೋ ಚಾಲಕ
ಬಾಡಿಗೆ ಇದ್ದರೆ ಜೀವನ
ಪ್ರತಿನಿತ್ಯ ಬಾಡಿಗೆ ಇದ್ದರೆ ಮಾತ್ರ ನಮ್ಮ ಜೀವನ ನಡೆಯಲಿದೆ. ಇಂತಹ ಪರಿಸ್ಥಿತಿ ಇರುವಾಗ ಈ ರಸ್ತೆಯಲ್ಲಿ ನಮ್ಮ ಆಟೋ ಓಡಾಡಿದರೆ ಬೇಗ ಹಾಳಾಗುತ್ತದೆ. ಪರಿಣಾಮ ಆಟೋ ರಿಪೇರಿ ಮಾಡೋದ್ರಲ್ಲೇ ನಮ್ಮ ಆದಾಯ ಖರ್ಚಾಗಿ ಹೋಗ್ತಿದೆ. ಹೀಗೆ ಆದ್ರೆ ಜೀವನ ಮಾಡೋದು ಹೇಗೆ? ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಆಟೋ ಚಾಲಕರು ಇದ್ದು, ಸಂಬಂಧಪಟ್ಟವರು ಇನ್ನಾದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.
ಅಜಿತ್ ಆಟೋ ಚಾಲಕ
ರಿಪೇರಿಗೆ ಎರಡು ದಿನ ಬೇಕು
ದಿನಂಪ್ರತಿ ಆಟೋ ಓಡಿದ್ರೇನೇ ನಮ್ಮ ಬದುಕು. ಹದಗೆಟ್ಟ ರಸ್ತೆಯಲ್ಲಿ ಆಟೋ ಓಡಾಡುವುದರಿಂದ ಆಗಾಗ ಆಟೋ ಕೆಟ್ಟು ನಿಲ್ಲುತ್ತಿದೆ. ಗ್ಯಾರೇಜ್ನಲ್ಲಿ ನಿಲ್ಲಿಸಿದರೆ ರಿಪೇರಿಗೆ ಒಂದೆರಡು ದಿನ ಬೇಕು. ಈ ದಿನಗಳಲ್ಲಿ ನಮ್ಮ ಆದಾಯ ಶೂನ್ಯ. ಇದೇ ನಮ್ಮ ಜೀವನದ ಮೂಲ ಆಧಾರ. ಇದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಹದಗೆಟ್ಟ ರಸ್ತೆಗೆ ಕಾಯಕಲ್ಪ ನೀಡುವ ಮೂಲಕ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು.
ರಂಜನ್ ಆಟೋ ಚಾಲಕ
ಮನಸ್ಸು ಮಾಡದಿರುವುದು ನೋವಿನ ಸಂಗತಿ
ಇದು ಯಾವುದೋ ಗ್ರಾಮೀಣ ರಸ್ತೆ ಅಲ್ಲ. ಬದಲಾಗಿ ರಾಜ್ಯ ಹೆದ್ದಾರಿ. ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಜನಪ್ರತಿನಿಧಿಗಳೂ ಇಲ್ಲಿ ಓಡಾಡುತ್ತಾರೆ. ಹೀಗಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ರಸ್ತೆಯನ್ನು ಸರಿಪಡಿಸುವ ಕುರಿತು ಮನಸ್ಸು ಮಾಡದಿರುವುದು ನೋವಿನ ಸಂಗತಿ. ಆದಷ್ಟು ಬೇಗ ಈ ರಸ್ತೆ ದುರಸ್ತಿ ಆಗಲಿ.
ಸುರೇಶ್ ಆಟೋ ಚಾಲಕರು
ಮನವಿ ಮಾಡಿದರೂ ಪ್ರಯೋಜನವಿಲ್ಲ
ಗಡಿ ಪ್ರದೇಶ ಎಂಬ ಕಾರಣಕ್ಕೆ ಈ ಮಾರ್ಗವನ್ನು ಕಡೆಗಣಿಸಲಾಗಿದೆ. ಅದಕ್ಕೆ ಈ ರಸ್ತೆಗಳೇ ಸಾಕ್ಷಿ. ಎರಡು ಜಿಲ್ಲೆಗಳನ್ನು ಬೆಸೆಯುವ ರಸ್ತೆ ಇದಾಗಿದ್ದರೂ ಗುಂಡಿ ಬಿದ್ದು ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳಿಗೆ ಬಹಳಷ್ಟು ಮನವಿ ಮಾಡಿದ್ದೇವೆ. ಆದರೂ ಪ್ರಯೋನವಾಗಿಲ್ಲ. ಮಳೆಗಾಲ ಮುಗಿದಿದ್ದು, ಇನ್ನಾದರು ಸಂಬಂಧಪಟ್ಟವರು ಈ ರಸ್ತೆಗೆ ಮುಕ್ತಿ ನೀಡಲಿ.
ಮೊಹಮ್ಮದ್ ಅಧ್ಯಕ್ಷ, ಆಟೋ ಚಾಲಕರ ಸಂಘ