ಹೊಳೆನರಸೀಪುರ : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ನಡೆಸುವ ವ್ಯಾಪಾರಿಗಳು ಕವರ್ ಡಕ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಡಿ.ನಾಗೇಂದ್ರ ಕುಮಾರ್ ಸೂಚಿಸಿದರು.
ವ್ಯಾಪಾರಿಗಳು ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ಸ್ಥಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಪಟ್ಟಣದ ಸ್ವಚ್ಛತೆ ಹಾಗೂ ಅಂಧ ಹೆಚ್ಚಿಸುವಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಆದರೆ ಬೀದಿ ವ್ಯಾಪಾರಿಗಳು ಬೇಕಾಬಿಟ್ಟಿ ಎಲ್ಲ ರಸ್ತೆಗಳಲ್ಲಿ ತಳ್ಳುವ ಸೈಕಲ್ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟು ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಕವರ್ ಡಕ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬೇಕು ಎಂದು ಸೂಚನೆ ನೀಡಿದರು.
ಕವರ್ ಡಕ್ ಮಾರುಕಟ್ಟೆ ವ್ಯಾಪಾರಿಗಳಿಲ್ಲದೆ ಬಣ ಗುಡುತ್ತಿರುತ್ತದೆ. ನಿತ್ಯ ತರಕಾರಿ, ಹಣ್ಣು-ಹಂಪಲ, ಹೂವು ಇತರೆ ಸಾಮಗ್ರಿ
ಮಾರಾಟ ಮಾಡುವ ಬೀದಿ ಬದಿಯ ವ್ಯಾಪಾರಿಗಳು ಜನದಟ್ಟಣೆಯಲ್ಲಿರುವ ರಸ್ತೆಗಳಲ್ಲಿ ಹಾಜರಾಗುತ್ತಾರೆ. ಇದು ವಾಹನ ಸಂಚಾರರಿಗೆ ಕಿರಿಕಿರಿ ಉಂಟು ಮಾಡಿದೆ. ವಾಹನಗಳನ್ನು ರಸ್ತೆ ಬದಿಗೆ ತಿರುಗಿಸಲು ಹರ ಸಾಹಸ ಪಡುತ್ತಿದ್ದಾರೆ.
ಜಯ ಚಾಮರಾಜೇಂದ್ರ ವೃತ್ತ, ಸುಭಾಷ್ ವೃತ್ತ, ಪೇಟೆ ಬೀದಿ, ಕೋಟೆ ರಸ್ತೆ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ಎದುರು, ಎಪಿಎಂಸಿ ರಸ್ತೆ ಬದಿ ಹೀಗೆ ಇತರ ರಸ್ತೆಗಳಲ್ಲಿ ವ್ಯಾಪಾರ ನಡೆಯುತ್ತಿದೆ. ವ್ಯಾಪಾರ ನಡೆಸುವವರಿಗೆ ಮಾನದಂಡ ವಿಧಿಸಿಲ್ಲ. ಬೇಕಾಬಿಟ್ಟಿಯಾಗಿ ಎಲ್ಲ ವಸ್ತುಗಳನ್ನು ಎಲ್ಲ ಜಾಗದಲ್ಲೂ ಮಾರಾಟ ಮಾಡಲಾಗುತ್ತಿದೆ. ಇದರಿಂದ ಪಟ್ಟಣದ ಸ್ವಚ್ಛತೆ ಹಾಳಾಗುತ್ತಿದೆ. ವ್ಯಾಪಾರಿಗಳು ತ್ಯಾಜ್ಯ ವಸ್ತುಗಳನ್ನು ರಸ್ತೆಗಳಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ಚರಂಡಿಯಲ್ಲಿ ತುಂಬಿಕೊಳ್ಳುತ್ತಿದೆ. ಇದರಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಗಮನಕ್ಕೆ ತಂದರು.