ಜಿಲ್ಲೆ

ಅಧ್ವಾನಗೊಂಡ ರಸ್ತೆಯಲ್ಲಿ ಸಂಚಾರ ದುಸ್ತರ

 ಬಿಡದಿ: ಪುರಸಭಾ ವ್ಯಾಪ್ತಿಯಲ್ಲಿನ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು, ನಿತ್ಯ ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಟ ನಡೆಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಮುಕ್ತಿ ನೀಡಬೇಕಾದ ಪುರಸಭಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿದ್ದೆಗೆ ಜಾರಿದ್ದಾರೆ.

ಹೌದು. ಪುರಸಭಾ ವ್ಯಾಪ್ತಿಯ 23 ವಾರ್ಡ್​ಗಳಲ್ಲಿ ರಸ್ತೆ ಸಮಸ್ಯೆ ಜೋರಾಗಿದೆ. ಯಾವುದೇ ವಾರ್ಡಿಗೆ ಹೋದರೂ ಮಂಡಿ ಉದ್ದ ಗುಂಡಿ ಬಿದ್ದಿವೆ. ಅದರಲ್ಲು ಕೇತಿಗಾನಹಳ್ಳಿ, ನಲ್ಲಿಗುಡ್ಡೆ ಕೆರೆ ರಸ್ತೆ, ಬಿಜಿಎಸ್​ ವೃತ್ತದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳೇ ಅಧ್ವಾನಗೊಂಡಿವೆ. ಕೇತಿಗಾನಹಳ್ಳಿ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ಗುಂಡಿ ಬಿದ್ದ ರಸ್ತೆಯಲ್ಲಿ ನೀರು ತುಂಬಿ ಗುಂಡಿ ಇದೆಯೋ ಇಲ್ಲವೋ ಎಂಬುದೆ ಗೊತ್ತಾಗಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಣ್ಣಿನಿಂದ ಕೂಡಿದ ರಸ್ತೆಗಳಿಂದ ಒಂದು ಕಡೆ ಧೂಳು, ಮತ್ತೊಂದು ಕಡೆ ಗುಂಡಿ ನಡುವೆ ಜನರು ಓಡಾಡಲು ಹೈರಣಾಗಿದ್ದಾರೆ. ಯುಜಿಡಿ ಕಾಮಗಾರಿ, ಕುಡಿಯುವ ನೀರಿನ ಪೈಪ್​ಲೈನ್​, ಗ್ಯಾಸ್​ಪೈಪ್​ ಲೈನ್​ ಉದ್ದೇಶದಿಂದ ರಸ್ತೆಯನ್ನು ಅಗೆದು ಅರ್ಧ ಕಾಮಗಾರಿ ಮಾಡಿ ಹಾಗೆ ಬಿಟ್ಟಿರುವುದು ಸಮಸ್ಯಗೆ ಪ್ರಮುಖ ಕಾರಣವಾಗಿದೆ.

ಕೆಲವು ವಾರ್ಡ್​ಗಳಲ್ಲಿ ಕಾಮಗಾರಿ ಮುಗಿದಿದ್ದರೂ ರಸ್ತೆಗೆ ಡಾಂಬರೀಕರಣ ಮಾಡಲು ಮುಂದಾಗಿಲ್ಲ.

ಗುಂಡಿ ತಪ್ಪಿಸಲು ಹೋಗಿ ಅಪಘಾತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಾಲಾ ವಾಹನಗಳು ಸೇರಿ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್​ಗಳಿಂದ ಬಿದ್ದು ಚಾಲಕರು ಗಾಯಗೊಂಡಿರುವ ಹಲವು ನಿದರ್ಶನಗಳಿವೆ. ವೇಗವಾಗಿ ಬರುವ ವಾಹನಗಳು ಗುಂಡಿಗೆ ಬಿಡುವ ಪರಿಣಾಮ ಗುಂಡಿಯಲ್ಲಿರುವ ಕೆಸರು ಪಾದಚಾರಿಗಳು, ಅಕ್ಕಪಕ್ಕದ ಅಂಗಡಿಗಳಿಗೆ ಚಿಮ್ಮುತ್ತಿದೆ. ಜಿಡ್ಡು ಹಿಡಿದ ಅಧಿಕಾರಿಗಳು ಬಿಡದಿ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆ ಕಂಡರೂ ಅಭಿವೃದ್ಧಿ ಮೇಲ್ದರ್ಜೆಗೇರಿಲ್ಲ. ಯುಜಿಡಿ ಕಾಮಗಾರಿ ಪ್ರಾರಂಭವಾಗಿ 5&6 ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಮುಕ್ತಾಯ ಮಾಡುವತ್ತ ಪುರಸಭೆಯ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದರಲ್ಲೂ ಕೆಲ ಇಂಜಿನಿಯರ್​ಗಳು ಕಚೇರಿಯಲ್ಲೇ ಕುಳಿತು ಕಾಲ ದೂಡುತ್ತಿದ್ದಾರೆ. ಸಾರ್ವಜನಿಕರು ಪುರಸಭಾ ಕಚೇರಿಗೆ ಹೋಗಿ ರಸ್ತೆಗಳ ಸಮಸ್ಯೆ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂಬುದು ಸ್ಥಳಿಯರ ಆರೋಪ. ಸದಸ್ಯರಿಗೆ ಕವಡೆ ಕಿಮ್ಮತ್ತಿಲ್ಲ ಪುರಸಭೆಯಲ್ಲಿನ ಇಂಜಿನಿಯರ್​ಗಳು ಸೇರಿ ಕೆಲ ಸಿಬ್ಬಂದಿ, ಚುನಾಯಿತ ಪುರಸಭಾ ಸದಸ್ಯರ ಮಾತಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಪುರಸಭಾ ವ್ಯಾಪ್ತಿಯಲ್ಲಿನ 11ನೇ ವಾರ್ಡ್​ನಲ್ಲಿ ಯುಜಿಡಿ ಕಾಮಗಾರಿಗೆ ಕಿತ್ತ ರಸ್ತೆಯನ್ನು ಸರಿಪಡಿಸದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಸಾಕಷ್ಟು ಲೇಔಟ್​ಗಳಿಗೆ ಸಂಪರ್ಕ ಕಡಿತವಾಗಿ, ಸುತ್ತಿ ಬಳಸಿ ಹೋಗಬೇಕಾಗಿದೆ. ಅಲ್ಲದೆ, ಕುಡಿಯುವ ನೀರಿನ ವಾಟರ್​ ಪೈಪ್​ಗಳು ಒಡೆದಿವೆ. ಈ ಬಗ್ಗೆ ಆ ವಾರ್ಡ್​ನ ಸದಸ್ಯರು ಪುರಸಭಾ ಕಚೇರಿಯ ಅಧಿಕಾರಿಗಳಿಗೆ ಸಮಸ್ಯೆ ಸರಿಪಡಿಸುವಂತೆ ಹೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಸದಸ್ಯೆ ಪತಿ ಕಲೀಲ್​ ಆರೋಪಿಸಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡಲಿ ಬಿಡದಿ ಪುರಸಭೆಯ ಅಭಿವೃದ್ಧಿಯ ವೇಗಕ್ಕೆ ಸ್ಥಳಿಯ ಶಾಸಕರು ಆಸಕ್ತಿ ತೋರಬೇಕಿದೆ. ಪ್ರಮುಖವಾಗಿ ಯುಜಿಡಿ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಚಾಟಿ ಬೀಸಬೇಕಿದೆ. ಪುರಸಭೆಯಲ್ಲಿ ನಡೆಯುವ ಸಾಮಾನ್ಯ ಸಭೆಗಳಿಗೆ ಬಂದು ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ ತುರ್ತಾಗಿ ಅಗತ್ಯ ಇರುವ ಕಾಮಗಾರಿಗಳನ್ನು ನಡೆಸುವಂತೆ ತಾಕೀತು ಮಾಡಬೇಕಿದೆ.

ಪುರಸಭಾ ವ್ಯಾಪ್ತಿಯ ನಮ್ಮ ವಾರ್ಡ್​ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಯುಜಿಡಿ ಕಾಮಗಾರಿಗೆ ಅಂತ ಅಗೆದ ಗುಂಡಿಗಳನ್ನು ಮುಚ್ಚುತ್ತಿಲ್ಲ. ಜೆಸಿಬಿ ಯಂತ್ರ ಕಳಸಿ ಎಂದರೆ ಪರಿಸರ ಅಭಿಯಂತರ ರಸ್ತೆ ಕೆಲಸಕ್ಕೆ ಕಳುಹಿಸಲ್ಲ ಎನ್ನುತ್ತಾರೆ. ಇಂಜಿನಿಯರ್​ಗಳು ನಮಗೇ ಸ್ಪಂದನೆ ಮಾಡುತ್ತಿಲ್ಲ ಎಂದರೆ ಇನ್ನೂ ಸಾಮಾನ್ಯ ಜನರ ಸಮಸ್ಯೆಗೆ ಸ್ಪಂದಿಸುತ್ತಾರಾ? > ಕಲೀಲ್​, 11 ನೇ ವಾರ್ಡ್​ ಸದಸ್ಯೆ ಪತಿ ಪುರಸಭಾ ವ್ಯಾಪ್ತಿಯಲ್ಲಿ ಯುಜಿಡಿ ಹೆಸರಿನಲ್ಲಿ ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಎಲ್ಲಿಯೂ ಪೂರ್ಣ ಮಾಡಿಲ್ಲ. ಎಲ್ಲ ಕಡೆ ಅರ್ಧ ಕಾಮಗಾರಿ ಮಾಡಿ ಬಿಟ್ಟಿದ್ದಾರೆ. ಅಧಿಕಾರಿಗಳನ್ನ ಪ್ರಶ್ನೆ ಮಾಡಿದರೆ ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿದು ಡಾಂಬರೀಕರಣ ಮಾಡಲಾಗುತ್ತದೆ ಎನ್ನುತ್ತಾರೆ. ಕೂಡಲೇ ಸಂಬಂಧಿಸಿದ ಪುರಸಭಾ ಅಧಿಕಾರಿಗಳು ಕ್ರಮವಹಿಸಿ ರಸ್ತೆ ಸರಿಪಡಿಸಬೇಕು. > ಮುತ್ತಣ್ಣ, ಸಾಮಾಜಿಕ ಹೋರಾಟಗಾರ ಬಿಡದಿ