ಆವಿಷ್ಕಾರ ಸಂತೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳ ತಂಡ.  
ಜಿಲ್ಲೆ

ಕುರಿಮಂದೆ ಸಾಗಿಸಲು ಸಂಚಾರಿ ಬೇಲಿ

ರವಿಕುಮಾರ್ ಪಿ. ಕೆ

ಹುಣಸೂರು: ಕುರಿಮಂದೆಯನ್ನು ಸಾಗಿಸಲು ಸಂಚಾರಿ ಬೇಲಿ ಅಳವಡಿಕೆ...ಮನೆ ಮುಂದಿನ ಕೈತೋಟಕ್ಕೆ ಸೋಲಾರ್ ಸರ್ಕ್ಯೂಟ್ ಮೂಲಕ ನೀರುಣಿಸುವುದು ಹೇಗೆ...ಜಮೀನಿನಲ್ಲಿ ಬೆಳೆಗಳಿಗೆ ಗೊಬ್ಬರ ಹಾಕಲು ಸುಲಭ ವಿಧಾನ ಯಾವುದು...

ಮಕ್ಕಳ ಮನೆಯ ಸಮಸ್ಯೆಗೆ ಪರಿಹಾರ ವೈಜ್ಞಾನಿಕ ಆವಿಷ್ಕಾರಗಳ ಸಂತೆಯಲ್ಲಿ ಸಿಕ್ಕಿದೆ. ಹೌದು ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಅಗಸ್ತ್ಯ ಫೌಂಡೇಷನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಇನ್ನೋವೇಟೀವ್ ಫೇರ್(ಆವಿಷ್ಕಾರದ ಸಂತೆ)ನಲ್ಲಿ ವಿದ್ಯಾರ್ಥಿಗಳ ಮನೆಯಲ್ಲಿ ಕಂಡುಬಂದ ಸಮಸ್ಯೆಗಳಿಗೆ ಪರಿಹಾರವನ್ನು ಅವರೇ ವೈಜ್ಞಾನಿಕ ಮನೋಭಾವದೊಂದಿಗೆ ಪರಿಹರಿಸಿಕೊಂಡ ಬಗೆ ಇದಾಗಿದೆ.

ಮನೆಯಲ್ಲಿರುವ ಕುರಿಗಳನ್ನು ಮೇಯಲು ಕರೆದೊಯ್ಯುವಾಗ ಅಡ್ಡಾದಿಡ್ಡಿ ಓಡಾಡಿ ಅಪಘಾತಗಳಿಗೆ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಸಂಚಾರಿ ಬೇಲಿಯನ್ನು ನಿರ್ಮಿಸಿ ಬೈಕ್ ಹಿಂಭಾಗದಲ್ಲಿ ಕಟ್ಟಿಕೊಂಡರೆ ಕುರಿಗಳು ಬೇಲಿಯೊಳಗೆ ಇದ್ದು ಬೈಕಿನೊಂದಿಗೆ ಸಾಗಿ ಬರುವ ಮೂಲಕ ಅಪಘಾತ ತಪ್ಪಿಸಬಹುದು ಎನ್ನುವುದನ್ನು ಮಾದರಿ ಮೂಲಕ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮನೆ ಮುಂದಿನ ಕೈತೋಟಕ್ಕೆ ನೀರೆರೆಯಲು ತಂದೆ- ತಾಯಿ, ಅಜ್ಜ ಅಜ್ಜಿಗೆ ಸಾಧ್ಯವಾಗದಿದ್ದಾಗ ಎಲೆಕ್ಟ್ರಿಕ್ ಸರ್ಕ್ಯೂಟ್ ಸ್ಥಾಪಿಸಿ ಸೂರ್ಯನ ಕಿರಣಗಳ ಮೂಲಕ ವಿದ್ಯುತ್ ಉತ್ಪಾದಿಸಿ ಸರ್ಕ್ಯೂಟ್‌ನಲ್ಲಿ ಅವಧಿ ನಿಗದಿಪಡಿಸಿದಲ್ಲಿ ಪ್ರತಿದಿನ ನಿಗದಿತ ಅವಧಿಗೆ ಸೋಲಾರ್ ಶಕ್ತಿಯ ಮೂಲಕ ಪೈಪಿನಲ್ಲಿ ನೀರು ಹರಿದು ಗಿಡಗಳ ಬುಡಗಳನ್ನು ಸೇರುತ್ತದೆ.

ಹೀಗೆ 20ಕ್ಕೂ ಹೆಚ್ಚು ತರಹೇವಾರಿ ಆಲೋಚನೆಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗಳು ತಮ್ಮದೇ ಕಲ್ಪನೆಯಲ್ಲಿ ವಿಜ್ಞಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು. ಇವರಿಗೆ ಬೆಂಬಲವಾಗಿ ಅಗಸ್ತ್ಯ ಫೌಂಡೇಷನ್ ಕೇಂದ್ರೀಯ ಮುಖ್ಯಸ್ಥ ಪ್ರಸಾದ್ ಮತ್ತವರ ತಂಡ ಸಾಥ್ ನೀಡಿತು.

ಶಾಲೆಯ ಮುಖ್ಯಶಿಕ್ಷಕ ಸಿ.ಎಸ್.ಮಹೇಶ್ ಚಿಲ್ಕುಂದ ಮಾತನಾಡಿ, ಅಗಸ್ತ್ಯ ಫೌಂಡೇಷನ್‌ನ ಸ್ವಯಂಸೇವಕರು ನಮ್ಮ ಶಾಲೆ, ನಗರದ ಕಲ್ಕುಣಿಕೆ ಪ್ರೌಢಶಾಲೆ, ಹಿರಿಯ ಪ್ರಾಥಮಿಕಶಾಲೆ ಮತ್ತು ಬಾಚಳ್ಳಿಯ ಆದರ್ಶ ವಿದ್ಯಾಲಯಕ್ಕೆ ಸತತವಾಗಿ ಭೇಟಿ ನೀಡಿ ಅಲ್ಲಿನ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಅವರ ಮನೆಯ ಸಮಸ್ಯೆಗೆ ಪರಿಹಾರ ವೈಜ್ಞಾನಿಕವಾಗಿ ಕಂಡುಕೊಳ್ಳಲು ದಾರಿ ತೋರಿದ್ದಾರೆ. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮಕ್ಕಳಲ್ಲಿನ ವೈಜ್ಞಾನಿಕ ಮನೋಭಾವ ಹೆಚ್ಚಲು ಇಂತಹ ಚಟುವಟಿಕೆಗಳು ಅಗತ್ಯವೆಂದರು. ಇಸಿಒ ಕುಮಾರಸ್ವಾಮಿ, ಬಿಆರ್‌ಪಿ ಎಸ್.ಪ್ರತಿಮಾ, ಬಿ.ಎಸ್.ಸುಶ್ಮಾ, ತೀರ್ಪುಗಾರರಾಗಿ ವಾಣಿಶ್ರೀ, ಸುನಂದಾ, ಜಗದೀಶ್, ಫೌಂಡೇಷನ್‌ನ ವಾಸು, ನಾಗೇಶ್, ನಾರಾಯಣ್, ರವಿನಂದನ್ ಇತರರು ಭಾಗವಹಿಸಿದ್ದರು.

ವಿಜೇತರು: ಪ್ರಥಮ ಬಹುಮಾನ ಕಲ್ಕುಣಿಕೆ ಸ.ಹಿ.ಪ್ರಾ.ಶಾಲೆಯ ಜೀವಿಕ, ಭೂಮಿಕ ತಂಡ (ಸ್ಮಾರ್ಟ್‌ಗಾರ್ಡನ್), ಬಾಲಕಿಯರ ಸ.ಹಿ.ಪ್ರಾ.ಶಾಲೆಗೆ ದ್ವಿತೀಯ ಬಹುಮಾನ-ರಮ್ಯಾ, ಚೇತನ(ಬೆಳೆ ರಕ್ಷಕ ಯಂತ್ರ), ತೃತೀಯ ಬಹುಮಾನ ಕಲ್ಕುಣಿಕೆಯ ಸ.ಹಿ.ಪ್ರಾ.ಶಾಲೆಯ ಅಂಕಿತಾ, ಮನಿಕ ತಂಡಕ್ಕೆ(ಸ್ಮಾರ್ಟ್ ಶೂ) ಮತ್ತು ನಾಲ್ಕನೇ ಬಹುಮಾನ ಆದರ್ಶ ವಿದ್ಯಾಲಯದ ಭಾನುಪ್ರಿಯ, ಸಾನ್ವಿ ತಂಡಕ್ಕೆ(ಸೋಲಾರ್ ಐರನ್‌ಕಾರ್ಡ್) ಲಭಿಸಿತು.