ನರಸಿಂಹ ನಾಯಕ್ ಬೈಂದೂರು
ಅಧಿಕಾರಿಗಳ ದೂರದೃಷ್ಟಿಯ ಕೊರತೆ, ಇಲಾಖೆಯ ಎಡವಟ್ಟಿನ ಕಾರಣದಿಂದ ಇದೀಗ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೋಟೆಮನೆ ಗ್ರಾಮಸ್ಥರು ಊರಿನ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಶಿರೂರು ಗ್ರಾಮ ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿದೆ. 1990ರಲ್ಲಿ ಹಾದುಹೋದ ಕೊಂಕಣ ರೈಲ್ವೆ ಊರನ್ನು ಇಬ್ಭಾಗ ಮಾಡಿದ್ದು, ಹಡವಿನಕೋಣೆ ಮತ್ತು ಕೋಟೆಮನೆ ಊರಿಗೆ ಸಂಪರ್ಕಿಸುವ ರಸ್ತೆಗಳು ರೈಲ್ವೆ ಹಳಿಯಾಗಿ ದಾಟಿ ಹೋಗಬೇಕಾಗಿದೆ. ಆದರೆ ರೈಲ್ವೆ ಇಲಾಖೆ ಪ್ರಸ್ತುತ ಈ ರೈಲ್ವೆ ಗೇಟು ಮುಚ್ಚುವ ತಯಾರಿಯಲ್ಲಿದ್ದು, ಸುಮಾರು ಮೂರು ಕಿ.ಮೀ ಸುತ್ತುಬಳಸಿ ನಿರ್ಮಿಸಿದ ಮಾರ್ಗವನ್ನು ಸಾರ್ವಜನಿಕರಿಗೆ ನೀಡುವ ಸಿದ್ಧತೆ ನಡೆಸುತ್ತಿದೆ. ಇದರಿಂದಾಗಿ ಈ ಭಾಗದ ಜನರು ಶಿರೂರು ಪೇಟೆ ಹಾಗೂ ಹೆದ್ದಾರಿ ಸಂಪರ್ಕವನ್ನೇ ಕಡಿದುಕೊಳ್ಳುವ ಆತಂಕದಲ್ಲಿದ್ದಾರೆ.
ಈಗಿನ ಗೇಟ್ ಮುಚ್ಚಿದರೆ ರಾಷ್ಟ್ರೀಯ ಹೆದ್ದಾರಿ-66ರಿಂದ ಮೂರು ಕಿ.ಮೀ ಸುತ್ತುವರೆದು ಸಂಚರಿಸಬೇಕಾಗುತ್ತದೆ. ವರ್ಷಾವಧಿಯ ಐತಿಹಾಸಿಕ ಪ್ರಸಿದ್ದ ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಜಾತ್ರೆಗೆ ಕೂಡ ತೊಂದರೆಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆ ಪಡೆಯುವುದೂ ಕಷ್ಟವಾಗಲಿದೆ.
ರೈಲ್ವೆ ಅಧಿಕಾರಿಗಳು ಕೋಟೆಮನೆ ಸಮೀಪದ ರೈಲ್ವೆ ಗೇಟ್ ಮುಚ್ಚುವ ಪ್ರಸ್ತಾವನೆ ಮೇಲಧಿಕಾರಿಗಳಿಗೆ ಈಗಾಗಲೇ ರವಾನಿಸಿದ್ದು, ಸದ್ಯದಲ್ಲೆ ಕಾಮಗಾರಿ ಆರಂಭಿಸುವ ತರಾತುರಿಯಲ್ಲಿದ್ದಾರೆ. ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಏಕಾಏಕಿ ಗೇಟ್ ಮುಚ್ಚುವ ವಿಚಾರಕ್ಕೆ ಸ್ಥಳೀಯರು ವಿರೋಧಿಸಿದ್ದು, ಬದಲಿ ಮಾರ್ಗದಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಇಲಾಖೆ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಿರೂರಿನ ಕೋಟೆಮನೆ ಭಾಗದಲ್ಲಿ ಪ್ರತಿ ರೈಲು ಸಂಚಾರ ಸಂದರ್ಭ ಅರ್ಧ ಗಂಟೆ ಕಾಯಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಬೇಡಿಕೆ ಇದ್ದು, ಇದವುರೆಗೆ ಸಾಕಾರಗೊಂಡಿಲ್ಲ. ಅಲ್ಲದೇ ಈ ಭಾಗದಲ್ಲಿ ಸುಮಾರು 60 ಕುಟುಂಬಗಳು ಇದ್ದು, ನೂರಾರು ಎಕರೆ ಕೃಷಿ ಭೂಮಿ ಇದೆ. ಈ ಕುಟುಂಬಗಳು ಹೆಚ್ಚಾಗಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇಲಾಖೆಯ ನಿರ್ಧಾರದಿಂದ ಪ್ರಮುಖವಾಗಿ ಈ ಕುಟುಂಬಗಳೇ ತೊಂದರೆಗೆ ಒಳಗಾಗಲಿವೆ.
ಹಲವು ವರ್ಷಗಳಿಂದ ಹೊಂದಿಕೊಂಡಿರುವ ವ್ಯವಸ್ಥೆಗೆ ಇಲಾಖೆ ಇನ್ನೊಂದು ಸಬೂಬು ನೀಡಿ ಸಮೀಪದ ದಾರಿ ಬದಲಿಸುವ ನಿರ್ಧಾರ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಈಗಾಗಲೆ ಸಚಿವ, ಸಂಸದ, ಶಾಸಕರಿಗೆ ಮನವಿ ನೀಡಲಾಗಿದೆ. ಅಧಿಕಾರಿಗಳು ಕೂಡ ಸ್ಥಳೀಯರ ವಾಸ್ತವತೆ ಅರಿತು ಕಾಮಗಾರಿ ನಡೆಸಲು ಮುಂದಾಗಬೇಕು. -ನಾರಾಯಣ ಮೇಸ್ತ ಕೋಟೆಮನೆ ಸುರಕ್ಷತಾ ದೃಷ್ಠಿಯಿಂದ ಈ ರೀತಿಯ ಬದಲಾವಣೆ ಮಾರ್ಗ ನಿರ್ಮಿಸಲಾಗುತ್ತದೆ. ಸ್ಥಳೀಯರ ಅಭಿಪ್ರಾಯಗಳನ್ನು ಮೇಲ ಧಿಕಾರಿಗಳ ಗಮನಕ್ಕೆ ತರಲಾಗುವುದು. ಸಮರ್ಪಕ ನಿರ್ಣಯ ಬರುವವರೆಗೆ ಗೇಟ್ ಬಂದ್ ಮಾಡುವುದಿಲ್ಲ. -ಸುಧಾ ಕೃಷ್ಣಮೂರ್ತಿ ಸಂಪರ್ಕಾಧಿಕಾರಿ ಕೊಂಕಣ ರೈಲ್ವೆ https://www.vijayavani.net/handover-of-free-houses https://www.vijayavani.net/varalakshmi-nilaya-inauguration