ಸುನಿಲ್‌ಕುಮಾರ್ ಬೋರ್ಕಾರ್ ವಿರಾಜಪೇಟೆ
ಕಿರಿದಾದ ಬೈಪಾಸ್ ರಸ್ತೆ, ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆಯಿಂದ ವಿರಾಜಪೇಟೆ ಪಟ್ಟಣದಲ್ಲಿ ವಾಹನ ಸಂಚಾರ ಸವಾಲಾಗಿ ಪರಿಣಮಿಸಿದೆ.
ಬಾಳುಗೋಡು-ಬಿಟ್ಟಂಗಾಲ ರಸ್ತೆ ಸರಿ ಇಲ್ಲದ ಕಾರಣ ಮೈಸೂರು-ಕೇರಳ ಪ್ರಯಾಣಿಕರು ಪಟ್ಟಣದೊಳಗೆ ಸಂಚರಿಸುವುದರಿಂದ ವಾಹನ ದಟ್ಟಣೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ.
ಪಟ್ಟಣದೊಳಗೆ ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದರಿಂದ ಜನರು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿದ್ದಾರೆ. ಅದರಲ್ಲೂ ಸಂತೆಯ ದಿನ ಪಟ್ಟಣದೊಳಗೆ ಸಂಚರಿಸುವುದೇ ಕಷ್ಟ ಸಾಧ್ಯವಾಗುತ್ತಿದೆ.
ಗಡಿಯಾರ ಕಂಬದ ಬಳಿ ಇರುವ ದ್ವಿಚಕ್ರ ವಾಹನ ನಿಲುಗಡೆಯನ್ನು ತೆರವುಗೊಳಿಸಲಾಗಿದ್ದು, ಬೈಕ್ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೇ, ಕೆಲ ಅಂಗಡಿ-ಮುಂಗಟ್ಟುಗಳ ಎದುರು ಕಬ್ಬಿಣದ ಸರಳುಗಳನ್ನು ಹಾಕಿರುವುದರಿಂದ ರಸ್ತೆ ಬದಿ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.
ಪಾರ್ಕಿಂಗ್ ಜಾಗದಲ್ಲಿ ವ್ಯಾಪಾರ: ವಿರಾಜಪೇಟೆಯಲ್ಲಿ ಬುಧವಾರ ಸಂತೆ ನಡೆಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನರು ಪಟ್ಟಣಕ್ಕೆ ಬಂದು ಖರೀದಿ ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಾರೆ. ವಿವಿಧ ಭಾಗದಿಂದ ಬರುವ ವ್ಯಾಪಾರಿಗಳು ರಸ್ತೆಬದಿಯ ಪಾರ್ಕಿಂಗ್ ಜಾಗದಲ್ಲೇ ಅಂಗಡಿಗಳನ್ನು ಹಾಕಿ ವ್ಯಾಪಾರ-ವಹಿವಾಟು ನಡೆಸುತ್ತಾರೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಉಲ್ಭಣಿಸುವುದರ ಜತೆಗೆ ವಾಹನ ಸಂಚಾರವೂ ಸವಾಲಾಗಿ ಪರಿಣಮಿಸುತ್ತದೆ. ಜನರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಖರೀದಿಯಲ್ಲಿ ತೊಡಗುವುದು ಕೂಡ ಸಮಸ್ಯೆಯಾಗಿ ಕಾಡುತ್ತಿದೆ.
ಅವೈಜ್ಞಾನಿಕ ಕಾಮಗಾರಿ: ಪಟ್ಟಣದಲ್ಲಿ ಇತ್ತೀಚೆಗೆ ಅಮೃತ್-2 ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಸಲಾಯಿತು. ಪೈಪ್‌ಲೈನ್ ಅಳವಡಿಸಲು ಗುಂಡಿ ತೆಗೆದು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಇಲ್ಲಿ ಮುಚ್ಚಿದ ಗುಂಡಿಗಳು ಮತ್ತೆ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಇನ್ನು ಸಣ್ಣ ಮಳೆ ಬಂದರೂ ಗುಂಡಿಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತಿದೆ. ಅಂಡಗಿ ಮುಂಗಟ್ಟುಗಳ ಮುಂದೆ ಹಾಕಲಾದ ಇಂಟರ್‌ಲಾಕ್‌ಗಳನ್ನು ತೆಗದು ಎಲ್ಲೆಂದರಲ್ಲಿ ರಾಶಿ ಹಾಕಲಾಗಿದೆ. ಇವುಗಳನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು: ಕೊಣನೂರು-ಕೇರಳ ಅಂತಾರಾಜ್ಯ ರಸ್ತೆ ಅಭಿವೃದ್ಧಿಯಾದರೆ ಪಟ್ಟಣದಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಆದರೆ, ವಿರಾಜಪೇಟೆ ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಪಟ್ಟಣದ ರಸ್ತೆ ಬದಿ ಮನೆಯ ಮಾಲೀಕರು ಹಾಗೂ ಅಂಗಡಿ ಮಾಲೀಕರು ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವುದರಿಂದ ರಸ್ತೆ ಅಭಿವೃದ್ಧಿ ಕೆಲಸ ಅರ್ಧಕ್ಕೆ ನಿಂತಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆ ಬಗೆಹರಿಯುತ್ತದೆ.