ಜಿಲ್ಲೆ

ತಾಂಡಾಗಳಲ್ಲಿ ಸಂಪ್ರದಾಯದ ಸೀತ್ಲಾ ಹಬ್ಬ

ಲಕ್ಷ್ಮೇಶ್ವರ: ತಾಲೂಕಿನ ತಾಂಡಾಗಳಲ್ಲಿ ಮಂಗಳವಾರ ಕ್ಷುದ್ರ ದೇವತೆಗಳನ್ನು ಸಂತೃಪ್ತಪಡಿಸುವ ಸೀತ್ಲಾ/ಸಾತಿಯಾಡಿ(ಏಳುಮಕ್ಕಳ ತಾಯಿ) ದೇವತೆಯ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ತಾಂಡಾ ಹೊರವಲಯದ ಬೇವಿನಮರದ ಬುಡದಲ್ಲಿ ಬಂಜಾರ ಸಮಾಜದವರು ತಮ್ಮ ಕುಲದ ಶಕ್ತಿದೇವತೆ ಮರಿಯಮ್ಮ ತಾಯಿಯ ಸಪ್ತ ಅವತಾರಗಳ 7 ಕಲ್ಲುಗಳನ್ನಿಟ್ಟು ಅವುಗಳಿಗೆ ಕೆಮ್ಮಣ್ಣು ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡಲಾಯಿತು. ಬಳಿಕ ಓರ್ವ ಲೂಕಡ್(ಸೇವಕ)ನನ್ನು ಪ್ರತಿಷ್ಠಾಪಿಸಿರುತ್ತಾರೆ. ತೆಂಗಿನಕಾಯಿ, ಸಿಹಿ ಭೋಜನದ ಎಡೆ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಈ ವೇಳೆ ಜಾನುವಾರುಗಳಿಗೂ ಯಾವುದೇ ರೀತಿಯ ರೋಗ-ರುಜಿನಗಳು ಬಾರದಂತೆ, ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರಲೆಂದು ಮತ್ತು ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಿದರು.

ಸದಾ ಪ್ರಕೃತಿಮಾತೆಯ ಮಡಿಲಿನಲ್ಲಿ ಬದುಕುವ ಬಂಜಾರರು ವಿವಿಧ ಋತುವಾರು ಮಳೆಯ ಕುರಿತು, ಗುಡುಗು ಸಿಡಿಲು, ಸುಂಟರಗಾಳಿ, ಬಿರುಗಾಳಿ, ಕೆರೆಕಟ್ಟೆ ಕೋಡಿ, ವಿವಿಧ ಪ್ರಾಣಿ ಸಸ್ಯಗಳ ವರ್ತನೆ ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ, ನಿಸರ್ಗದ ಬಗ್ಗೆ ನಿಷ್ಠೆ, ನಂಬಿ,ೆ ವಿಶ್ವಾಸವಿಟ್ಟು ಹಬ್ಬ ಹರಿದಿನಗಳ ಮೂಲಕ ಆಚರಣೆಗಳನ್ನು ಪಾಲಿಸುತ್ತಾರೆ ಎಂದು ಕೊಂಡಿಕೊಪ್ಪ ತಾಂಡಾದ ಶೋಭಾ ಲಮಾಣಿ ಹೇಳಿದರು.

ಮಂಜು ಲಮಾಣಿ, ಶೋಬಾ ಲಮಾಣಿ, ಶೇಖಪ್ಪ ಲಮಾಣಿ, ಸೋಮಪ್ಪ ಲಮಾಣಿ ಇದ್ದರು.