ಗೌರಿ ಹುಣ್ಣಿಮೆ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಮಾರಾಟಕ್ಕಿಟ್ಟಿರುವ ಸಕ್ಕರೆ ಗೊಂಬೆಗಳು. 
ಜಿಲ್ಲೆ

ಸಾಂಪ್ರದಾಯಿಕ ಉತ್ತರ ಕರ್ನಾಟಕದ ಸಕ್ಕರೆ ಗೊಂಬೆಗಳು

ಗುಳೇದಗುಡ್ಡ: ಗೌರಿಹುಣ್ಣಿಮೆ ಉತ್ತರ ಕರ್ನಾಟಕದ ಮಹಿಳೆಯರಿಗೆ ಸಂಭ್ರಮದ ಹಬ್ಬ. ಗೌರಿ ಹುಣ್ಣಿಮೆಗೆ ಶಿವನ ಮಡದಿ ಗೌರಿ (ಪಾರ್ವತಿ) ತನ್ನ ತವರು ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆ ಇದೆ.

ಹುಣ್ಣಿಮೆ ಸಂದರ್ಭ ಈ ಭಾಗದ ಊರು, ಗ್ರಾಮಗಳ ಕೆಲ ಮನೆಗಳಲ್ಲಿ ಗೌರಿದೇವಿ ಪ್ರತಿಷ್ಠಾಪಿಸುತ್ತಾರೆ. ಹೊತ್ತು ಮುಳುಗಿದ ಮೇಲೆ ಇಲ್ಲಿನ ಹೆಂಗಳೆಯರು ಗೌರಿ ಹುಣ್ಣಿಮೆ ಹಾಡುಗಳನ್ನು ಹಾಡುತ್ತ ಗೌರಿ ಪ್ರತಿಷ್ಠಾಪಿಸಿದ ಮನೆಗೆ ಹೋಗಿ ಆರತಿ ಬೆಳಗಿ, ಹಾಡು ಹಾಡಿ ಬರುವುದು ಇಲ್ಲಿನ ಸಂಪ್ರದಾಯ.

ಸಕ್ಕರೆ ಗೊಂಬೆಗಳು: ಉತ್ತರ ಕರ್ನಾಟಕದ ಗುಳೇದಗುಡ್ಡ, ಬಾದಾಮಿ, ಬಾಗಲಕೋಟೆ, ಇಳಕಲ್ಲ ಮತ್ತಿತರ ಊರುಗಳಲ್ಲಿ ಗೌರಿ ಹುಣ್ಣಿಮೆಯಲ್ಲಿ ಗೌರಿದೇವಿಗೆ ಆರತಿ ಬೆಳಗಲು ಮಹಿಳೆಯರು ಸಕ್ಕರೆಗೊಂಬೆಗಳನ್ನು ಆರತಿ ತಟ್ಟೆಯಲ್ಲಿಟ್ಟುಕೊಂಡು ಗೌರಿದೇವಿ ಪ್ರತಿಷ್ಠಾಪಿಸಿದ ಮನೆಗೆ ತೆರಳಿ ಆರತಿ ಮಾಡುತ್ತಾರೆ. ಬಿಳಿ ಬಣ್ಣದ ಬಗೆಬಗೆಯ ವಿನ್ಯಾಸದ ಸಕ್ಕರಗೊಂಬೆಗಳು ಕಣ್ಣು ಕುಕ್ಕುವಂತಿರುತ್ತವೆ.

ಗೌರಿ ಹುಣ್ಣಿಮೆ ಹತ್ತು ದಿನಗಳಿದ್ದಾಗಲೇ ಸಕ್ಕರೆ ಗೊಂಬೆಗಳನ್ನು ತಯಾರಿಸಿ, ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಸಕ್ಕರೆ ಪಾಕವನ್ನು ಒಂದು ಹದಕ್ಕೆ ಕುದಿಸಿ ವಿವಿಧ ಗೊಂಬೆಗಳ ವಿನ್ಯಾಸ ಇರುವ ಕಟ್ಟಿಗೆಯ ಡೈಗಳಲ್ಲಿ ಸುರುವುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಕಟ್ಟಿಗೆಯ ಡೈಯನ್ನು ಬಿಚ್ಚಿದಾಗ ಅಚ್ಚಬಿಳುಪಿನ ಸುಂದರ ಸಕ್ಕರೆ ಗೊಂಬೆಗಳು ರೂಪುಗೊಳ್ಳುತ್ತವೆ.

ಗೌರಿ ಹುಣ್ಣಿಮೆ ವೇಳೆ ಇಂತಹ ಸಕ್ಕರೆ ಗೊಂಬೆಗಳನ್ನು ಪರಂಪರಾಗತವಾಗಿ ತಯಾರಿಸಿಕೊಂಡು ಬರುತ್ತಿರುವ ಅನೇಕ ಕುಟುಂಬಗಳು ಗುಳೇದಗುಡ್ಡದಲ್ಲಿ ಕಾಣಬಹುದು. ರಥ, ದೇವಸ್ಥಾನ, ಗಿಳಿ, ನವಿಲು, ಮಂಗ, ರಾಮಸೀತೆ, ಹನುಮಂತ, ಹತ್ತು ತಲೆ ರಾವಣ, ಬೆಣ್ಣೆಕಡೆಯುವ ಮಹಿಳೆ, ಹೊಲ ಬಿತ್ತುತ್ತಿರುವ ರೈತ, ಬಸವಣ್ಣ ಹೀಗೆ ಬಗೆಬಗೆಯ ಸಕ್ಕರೆ ಗೊಂಬೆಗಳು ನೋಡುಗರನ್ನು ಆಕರ್ಷಿಸುವಂತಿರುತ್ತವೆ.

ಗೌರಿ ಹುಣ್ಣಿಮೆ ಸಂದರ್ಭ ಮದುವೆ ನಿಶ್ಚಯಗೊಂಡ ಕನ್ಯೆಯ ಅತ್ತೆ ಮನೆಯವರು ಸಕ್ಕರೆ ಗೊಂಬೆಗಳನ್ನು ನೀಡಿ, ಹೊಸ ಸೀರೆ ಉಡಿಸಿ, ಹೂವು ಮುಡಿಸಿ ಬರುವುದು ಇಲ್ಲಿನ ಸಂಪ್ರದಾಯ. ಇದಕ್ಕೆ ನಡತಿ ಕೊಡುವುದು ಎನ್ನುತ್ತಾರೆ.