ಜಿಲ್ಲೆ

ಸಾಂಪ್ರದಾಯಿಕ ವೈದ್ಯ ಪರಂಪರೆಯತ್ತ ಒಲವು: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಹೇಳಿಕೆ

ಚಿಕ್ಕಬಳ್ಳಾಪುರ: ಸತ್ಯಸಾಯಿ ಸೇವಾ ಸಂಸ್ಥೆಯು ಆಧ್ಯಾತ್ಮಿಕ, ಶಿಕ್ಷಣ, ಸಾಮಾಜಿಕ ಸೇವಾ ಕಾರ್ಯಗಳ ಜತೆಗೆ ಆರೋಗ್ಯ ಸುಧಾರಣೆಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಗುಣಾತ್ಮಕ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಪ್ರೇಮಾಮೃತಂ ಸಭಾಭವನದಲ್ಲಿ ಸೋಮವಾರ ಕೈಗೊಂಡಿದ್ದ ವಿಶ್ವ ಜಾಗತಿಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಅಲೋಪಥಿ ಮಾದರಿಯಲ್ಲಿ ಸಾಂಪ್ರದಾಯಿಕ ವೈದ್ಯ ಪರಂಪರೆಯ ಕಡೆಗೆ ಇಂದು ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಸಂಶೋಧನೆ, ಪ್ರತಿಪಾದನೆ, ದಾಖಲೀಕರಣದ ಅಗತ್ಯವಿದೆ. ಇದನ್ನು ಮನಗಂಡು ದೇಶದಲ್ಲಿಯೇ ಮೊದಲ ಸರ್ಕಾರಿ ಆಯುಷ್ ವಿಶ್ವವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲು ಸಚಿವ ಸಂಪುಟವು ಅನುಮತಿ ನೀಡಿದೆ ಎಂದರು.

ವೈದ್ಯಕೀಯ ಶಿಕ್ಷಣ ಕಾಲೇಜಿನ ಪ್ರಾರಂಭಕ್ಕೆ ಭಾರಿ ಪ್ರಮಾಣದ ಹಣವನ್ನು ಬಂಡವಾಳ ಹೂಡಬೇಕಾದ ಪರಿಸ್ಥಿತಿ ಇದೆ. ಇದನ್ನು ನಿಭಾಯಿಸಲು ಸಂಸ್ಥೆಗಳು ದಾಖಲಾತಿ ಮತ್ತು ಚಿಕಿತ್ಸೆಯ ಹೊರೆ ಹೊರಬೇಕಾಗುತ್ತದೆ. ಇನ್ನು ವೈದ್ಯಕೀಯ ಕೋರ್ಸ್‌ಗೆ ದುಬಾರಿ ಶುಲ್ಕವಿರುವುದರಿಂದ ಭಾರತದ ವಿದ್ಯಾರ್ಥಿಗಳು ಅಮೆರಿಕ, ರಷ್ಯಾ, ಯೂಕ್ರೇನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಅಧ್ಯಯನಕ್ಕೆ ತೆರಳುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶದಾದ್ಯಂತ ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ, ಸೀಟುಗಳ ಹೆಚ್ಚಳ ಸೇರಿ ಹಲವು ಕ್ರಮ ಕೈಗೊಂಡಿದೆ ಎಂದರು. ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಧರ್ಮ, ಕಾಮ ಅರ್ಥ, ಮೋಕ್ಷ ಭಾರತೀಯ ಪರಂಪರೆಯ ಬದುಕಿನ ಭಾಗವಾಗಿವೆ ಎಂದರು.

ಸರ್ಕಾರದ ಜತೆಗೆ ಸಮಾಜ ಸುಧಾರಣೆಯ ಪರ ಮನೋಭಾವ ಹೊಂದಿರುವ ಸೇವಾ ಸಂಸ್ಥೆಗಳು ಆರೋಗ್ಯ, ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಬೇಕಾಗಿದೆ. ಈ ಎರಡೂ ಕ್ಷೇತ್ರಗಳು ಲಾಭದಾಯಕ ದೃಷ್ಟಿಯಿಂದ ಸೇವಾ ಕ್ಷೇತ್ರವಾಗಿ ಬದಲಾಗುವ ಅಗತ್ಯವಿದೆ ಎಂದರು. ಸತ್ಯ ಸಾಯಿ ಸರಳಾ ಸ್ಮಾರಕ ಆಸ್ಪತ್ರೆಯು ಆತ್ಯಾಧುನಿಕ ಮತ್ತು ಸುಧಾರಿತ ಎನ್‌ಐಸಿ ಘಟಕ ಹೊಂದಿದೆ. ಉಚಿತ ಸೇವೆ ಒದಗಿಸುತ್ತಿದೆ ಎಂದರು. ಆರೋಗ್ಯದ ಸುಧಾರಣೆ ಬಯಸಿ ಉತ್ತರ ಭಾರತದ ರೋಗಿಗಳು ಸೇರಿ ದೇಶ ವಿದೇಶಗಳ ಜನರು ಮುದ್ದೇನಹಳ್ಳಿಗೆ ಬರುತ್ತಿದ್ದು, ಇವರ ಅನುಕೂಲಕ್ಕಾಗಿ ಜಿಲ್ಲೆಯ ನಂದಿಯ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದರ ಅಗತ್ಯವಿದೆ. ಇದರ ಬಗ್ಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರುಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹ ಮೂರ್ತಿ, ಉಪಕುಲಪತಿ ಶ್ರೀಕಂಠಮೂರ್ತಿ ಮತ್ತಿತರರು ಇದ್ದರು.