ಶ್ರವಣಬೆಳಗೊಳ: ನಮ್ಮ ಸಂಸ್ಕೃತಿ, ಪರಂಪರೆ, ಸಿದ್ಧಾಂತ, ಆಚಾರ-ವಿಚಾರ, ಕೃಷಿ, ಧಾರ್ಮಿಕ ಪೂಜಾ ವಿಧಿ-ವಿಧಾನದೊಂದಿಗೆ ಎಲ್ಲ ರೀತಿಯ ಭಾರತೀಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪಾರಂಪರಿಕ ಗುರುಕುಲವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶ್ರವಣಬೆಳಗೊಳ ಶ್ರೀ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಶ್ರೀಧವಲತೀರ್ಥಂನಲ್ಲಿರುವ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ಗುರುಕುಲ ಕಟ್ಟಡ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಂದಾಜು 4.5 ಕೋಟಿ ರೂ. ವೆಚ್ಚದಲ್ಲಿ 26,000 ಚ. ಅಡಿಯ 15 ಕೊಠಡಿಗಳ ಪುರಾತನ ಶೈಲಿಯ ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡುತ್ತಿರುವ ಪಾರಂಪರಿಕ ಕಟ್ಟಡ ಇದಾಗಲಿದೆ ಎಂದರು.
ಹಿಂದಿನಿಂದಲೂ ಶ್ರೀಮಠದ ಪೀಠದಲ್ಲಿದ್ದ ಎಲ್ಲ ಸ್ವಾಮೀಜಿಗಳು ಜ್ಞಾನಕ್ಕೆ ಹೆಚ್ಚಿನ ಆದ್ಯತೆ ಕೊಡುವುದರ ಜತೆಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಹಾಗೂ ಮಹಿಳಾ ಶಿಕ್ಷಣಕ್ಕೂ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಶ್ರವಣಬೆಳಗೊಳದಲ್ಲಿ ಸಾವಿರಾರು ವರ್ಷಗಳಿಂದ ಗುರುಕುಲಗಳು ನಡೆದುಕೊಂಡು ಬರುತ್ತಿವೆ. ಸುಮಾರು 150 ವರ್ಷಗಳ ಹಿಂದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರೆಲ್ಲರೂ ಮದ್ರಾಸ್ ಪ್ರಾಂತ್ಯದವರಾಗಿದ್ದರು ಎನ್ನುವ ದಾಖಲೆಗಳು ಸಿಗುತ್ತವೆ. 1928 ರಲ್ಲಿ ಇಲ್ಲಿನ ಗುರುಗಳಾಗಿದ್ದ ನೇಮಿಸಾಗರವರ್ಣಿ ಚಾರುಕೀರ್ತಿ ಸ್ವಾಮೀಜಿ ಜೈನ ಸಂಸ್ಕೃತ ವೇದ ಮಹಾ ಪಾಠಶಾಲೆ ಎಂಬ ಬೃಹತ್ ಗುರುಕುಲ ತೆರೆದಿದ್ದರು. ಅಲ್ಲದೆ ದೇಶದಾದ್ಯಂತ ಅನೇಕ ಗುರುಕುಲಗಳನ್ನು ತೆರೆದು ವಿದ್ಯಾಭ್ಯಾಸಕ್ಕೆ ಮಹತ್ವ ನೀಡಿದ್ದರು ಎಮದು ಸ್ಮರಿಸಿದರು.
ನಮ್ಮ ಹಿಂದಿನ ಗುರುಗಳಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗೊಮ್ಮಟೇಶ್ವರ ವಿದ್ಯಾಪೀಠ ಬ್ರಹ್ಮಚರ್ಯ ಆಶ್ರಮ ಎಂಬ ಗುರುಕುಲ ತೆರೆದು, ತಾವು ಪೀಠಾಧ್ಯಕ್ಷರಾಗಿದ್ದ 54 ವರ್ಷಗಳ ಅವಧಿಯಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದ್ದರು. ಈ ಗುರುಕುಲದಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಅನೇಕರು ಸಾಧು ಸಂತರಾಗಿದ್ದು, ಪ್ರಸ್ತುತ ಕರ್ನಾಟಕದಲ್ಲಿರುವ ಹಲವಾರು ಜೈನ ಮಠಗಳಿಗೆ ಪೀಠಾಧಿಪತಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಗುರುಕುಲದಲ್ಲಿ ಪ್ರಸ್ತುತ ಒಟ್ಟು 205 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2024 ರಿಂದ ಕಾಳಲಾದೇವಿ ಕನ್ಯಾಶ್ರಮ ಗುರುಕುಲವನ್ನು ಮರು ಆರಂಭಿಸಿ 35 ವಿದ್ಯಾರ್ಥಿನಿಯರಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಬಟ್ಟೆ, ಸಮವಸ್ತ್ರ ಪುಸ್ತಕ, ಊಟ-ಉಪಹಾರ ಸೇರಿದಂತೆ ಅವರ ಶಿಕ್ಷಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಉಚಿತವಾಗಿ ವ್ಯವಸ್ಥೆ ಮಾಡುವ ಮೂಲಕ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಸಿಬಿಎಸ್ಸಿ ಮಾದರಿಯ ಶಿಕ್ಷಣವನ್ನೂ ಉಚಿತವಾಗಿ ನೀಡಬೇಕು ಎಂಬ ಉದ್ದೇಶದಿಂದ ಮುಂದಿನ 2030 ರ ಮಹಾಮಸ್ತಕಾಬಿಷೇಕ ಮಹೋತ್ಸವದೊಳಗೆ 1008 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ದಾನಿಗಳಾದ ರಾಜಸ್ಥಾನದ ಕವೀಶ್ ಜೈನ್, ಕೃತಿ ಜೈನ್ ಹಾಗೂ ಕಿಯಾಂಶ್ ಜೈನ್ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಶ್ರೀ ಮಠದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್‌ಕುಮಾರ್, ಸದಸ್ಯರಾದ ಭರತೇಶ್, ಯಶಸ್, ಪೌದನ್ ಮುಂತಾದವರಿದ್ದರು.