ಗಂಗೊಳ್ಳಿ: ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭಗೊಳ್ಳಲು ದಿನಗಣನೆ ಆರಂಭವಾಗಿರುವಂತೆಯೇ ಗಂಗೊಳ್ಳಿಯಲ್ಲಿ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ. ಕಳೆದ ಮೂರ‌್ನಾಲ್ಕು ದಿನಗಳಿಂದ ಉತ್ತಮ ಮೀನುಗಾರಿಕೆ ನಡೆಯುತ್ತಿದೆ. ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್ ಸಮೀಪದ ಮಡಿ ಮತ್ತು ಗುಜ್ಜಾಡಿ ಗ್ರಾಮದ ಬೆಣ್ಗೆರೆ ಎಂಬಲ್ಲಿ ನಾಡದೋಣಿ ಮೀನುಗಾರಿಕೆ ಉತ್ತಮವಾಗಿ ನಡೆಯುತ್ತಿದ್ದು, ಚಟ್ಲಿ, ಬಂಗುಡೆ ಮೊದಲಾದ ಉತ್ತಮ ಜಾತಿಯ ಮೀನುಗಳು ದೊರೆಯುತ್ತಿವೆ. ಸಣ್ಣ ಚಟ್ಲಿ (ತೆಮ್ಲಿ) ಕೆಜಿಗೆ 120-150 ರೂ.ಗಳಿದ್ದರೆ, ಚಟ್ಲಿ ಕೆಜಿಗೆ 450-500 ರೂ.ಗಳಿದ್ದು, ಬಂಗುಡೆ ಕೆಜಿಗೆ 125-150 ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಕಳೆದ ಅನೇಕ ದಿನಗಳಿಂದ ನಾಡದೋಣಿ ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಮೀನುಗಾರರಿಗೆ ಹವಾಮಾನ ವೈಪರೀತ್ಯ ಅಡ್ಡಿಯಾಗಿತ್ತು. ಕಳೆದ ಮೂರ‌್ನಾಲ್ಕು ದಿನಗಳಿಂದ ಬಹುತೇಕ ದೋಣಿಗಳು ಕಡಲಿಗಿಳಿದಿವೆ. ನಾಡದೋಣಿಗಳ ಮೂಲಕ ಹಿಡಿಯುವ ಮೀನುಗಳಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಕೂಡ ಇದೆ. ಸಾಂಪ್ರದಾಯಿಕ ಮೀನುಗಾರಿಕೆ ಆರಂಭಗೊಂಡಂತೆ ಮಾರುಕಟ್ಟೆಯಲ್ಲಿ ತಾಜಾ ಮೀನುಗಳು ಲಗ್ಗೆ ಇಡುತ್ತದೆ. ವೈಟ್ ಚಟ್ಲಿ, ಕೆಂಪು ಚಟ್ಲಿ, ಜಾರಿ, ಬಂಗುಡೆ, ಪಾಪ್ಲೆಟ್, ಬೈಗೀ ಮೀನಿನ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಾರೆ.
ಕಳೆದ ಕೆಲವು ದಿನಗಳಿಂದ ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ನಿರೀಕ್ಷಿಸಿದಷ್ಟು ಮೀನು ಸಿಗುತ್ತಿಲ್ಲ. ಆದರೂ ಸಾಧಾರಣ ಮೀನುಗಾರಿಕೆ ನಡೆಯುತ್ತಿದೆ. ಮಳೆಗಾಲದಲ್ಲಿ ನಡೆಯುವ ನಾಡದೋಣಿ ಮೀನುಗಾರಿಕೆಗೆ ಈ ಬಾರಿ ಹೆಚ್ಚಿನ ಅವಕಾಶ ದೊರೆಯದಿರುವುದರಿಂದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಆಶಾದಾಯಕ ಮೀನುಗಾರಿಕೆ ನಡೆಯುವ ವಿಶ್ವಾಸವಿದೆ - ಸದಾಶಿವ ಖಾರ್ವಿ ಕಂಚುಗೋಡು, ಅಧ್ಯಕ್ಷರು, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ