ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ಪಟ್ಟಣದ ಮುಖ್ಯರಸ್ತೆಯ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನು ಬುಧವಾರ ಡೇ ನಲ್ಮ್ ಯೋಜನಾಧಿಕಾರಿ ವೆಂಕಟಾಚಲಪತಿ, ತಹಸೀಲ್ದಾರ್ ಸಿಗ್ಬತ್ವುಲ್ಲಾ ಹಾಗೂ ಪಪಂ ಮುಖ್ಯಾಧಿಕಾರಿ ಸಬಾಶೀರಿನಾ ತೆರವು ಮಾಡಿಸಿದರು.
ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಬೀದಿಬದಿ ವ್ಯಾಪಾರಸ್ಥರು ರಸ್ತೆ ಬದಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದರು. ಆದರೆ ಬುಧವಾರ ಅಧಿಕಾರಿಗಳು ಏಕಾಏಕಿ ಅಂಗಡಿ ತೆರವು ಮಾಡಿರುವುದನ್ನು ಅಂಗಡಿ ಮಾಲೀಕರು ವಿರೋಧಿಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಪಘಾತ ತಡೆಗೆ ತೆರವು ಅನಿವಾರ್ಯ : ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲೆ ಅಂಗಡಿ ತೆರೆದಿರುವುದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಅಂಗಡಿಗಳಿಗೆ ಚೀಲ, ಬ್ಯಾನರ್ ಕಟ್ಟಿ ಪಟ್ಟಣದ ಅಂದ ಕೆಡಿಸುತ್ತಿದ್ದಾರೆ. ಪಟ್ಟಣದ ಬೀದಿಬದಿ ವ್ಯಾಪಾರಸ್ಥರಿಗಾಗಿ ತಾಲೂಕು ಕಚೇರಿ ಮುಂಭಾಗ ಸರ್ಕಾರದಿಂದ ತಾತ್ಕಾಲಿಕ ಅಂಗಡಿ ಮಳಿಗೆ ತೆರೆದಿದ್ದು, ಅದರಲ್ಲಿ ವ್ಯಾಪಾರ ಮಾಡಿಕೊಳ್ಳಲಿ. ರಸ್ತೆಗೆ ಅಡ್ಡಲಾಗಿ ವಾಹನ ನಿಲ್ಲಿಸುವುದರಿಂದ ತೊಂದರೆ ಆಗುತ್ತಿದೆ. ಆಗಾಗ ಅಪಘಾತಗಳು ಆಗುತ್ತಿವೆ. ಆದ್ದರಿಂದ ತೆರವು ಅನಿವಾರ್ಯ ಎಂಬುದು ಅಧಿಕಾರಿಗಳ ವಾದ.
ವ್ಯಾಪಾರಸ್ಥರ ವಾದವೇನು?: ಸರ್ಕಾರದಿಂದ ಅವೈಜ್ಞಾನಿಕ ಮಳಿಗೆ ನಿರ್ಮಿಸಿದ್ದಾರೆ. ಅದರಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ, ಮಳೆ ಬಂದರೆ ನೀರು ನಿಲ್ಲುತ್ತದೆ. ನಾವು ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡರೇ ನೂರಾರು ಕಾನೂನು ಹೇಳುತ್ತಾರೆ. ಪ್ರತಿ ದಿನ ಸುಂಕ ಕಟ್ಟುತ್ತಿದ್ದೇವೆ. ಆದರೂ ಅಕ್ರಮ ಅಂಗಡಿ ಎಂದು ಕಿರುಕುಳ ನೀಡುತ್ತಾರೆ. ಚುನಾವಣೆ ವೇಳೆ ಮಾತ್ರ ಜನಪ್ರತಿನಿಧಿಗಳಿಗೆ ಬೀದಿಬದಿ ವ್ಯಾಪಾರಸ್ಥರ ಮತ ಬೇಕು. ಇಂತಹ ಸಮಯದಲ್ಲಿ ನಮ್ಮ ಪರ ಯಾರೂ ಬರುವುದಿಲ್ಲ ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.