ಜಿಲ್ಲೆ

ಏಕ ಬಳಕೆ ಪ್ಲಾಸ್ಟಿಕ್ ನಿಷೇಧ : ವರ್ತಕರಿಗೆ ಪುರಸಭೆ ಖಡಕ್ ಸೂಚನೆ

ಸೌಮ್ಯ ಆರ್

ಬಂಟ್ವಾಳ: ಬಂಟ್ವಾಳ ಪುರಸಭೆಯ ವಾಣಿಜ್ಯ ಸಂಕೀರ್ಣಗಳಲ್ಲಿ ಅಂಗಡಿ ಮುಂಗಟ್ಟು ಹೊಂದಿರುವ ವರ್ತಕರು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡುವ ಜತೆಗೆ ತಮ್ಮ ಉದ್ಯಮ ಪರವಾನಗಿ ಪಡೆದುಕೊಳ್ಳಬೇಕು. ಈ ನಿರ್ಣಯಗಳಿಗೆ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಅಂತಹ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಂಟ್ವಾಳ ಪುರಸಭೆ ಎಚ್ಚರಿಕೆ ನೀಡಿದೆ.

ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ ಅಧ್ಯಕ್ಷತೆಯಲ್ಲಿ ನಡೆದ ಪುರಸಭಾ ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯವಹರಿಸುತ್ತಿರುವ ವರ್ತಕರ ಸಭೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಚರ್ಚೆ ನಡೆಯಿತು. ಸಾಕಷ್ಟು ವರ್ತಕರು ಬಾಡಿಗೆ ಬಾಕಿ, ನೀರಿನ ಶುಲ್ಕ ಬಾಕಿ ಇಟ್ಟಿರುವುದರಿಂದ ಪುರಸಭೆ ಆದಾಯಕ್ಕೆ ಹೊಡೆತ ಬಿದ್ದು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ. ಹೀಗಾಗಿ ಶೀಘ್ರ ಬಾಕಿ ಇರುವ ಬಾಡಿಗೆ ಪಾವತಿ ಮಾಡುವಂತೆ ಅಧ್ಯಕ್ಷರು ಸೂಚಿಸಿದರು.

ವಾಣಿಜ್ಯ ಸಂಕೀರ್ಣಗಳಲ್ಲಿ ಅಂಗಡಿ ಕೋಣೆಗಳ ಹೊರಗೆ ಸರಕು ಇಟ್ಟು ವ್ಯಾಪಾರ ಮಾಡುತ್ತಿರುವುದರಿಂದ ಕಟ್ಟಡದಲ್ಲಿ ಓಡಾಡುವ ಸಾರ್ವಜನಿಕರು, ಇತರ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ದೂರು ಕೇಳಿ ಬರುತ್ತಿದೆ. ಹೀಗಾಗಿ ಅಂತಹ ವ್ಯಾಪಾರ ಮಾಡುವವರು ತಕ್ಷಣ ಅದನ್ನು ನಿಲ್ಲಿಸಿ ತಮಗೆ ನೀಡಲಾದ ಅಂಗಡಿ ಕೋಣೆ ಒಳಗೆ ವ್ಯಾಪಾರ ಮಾಡಬೇಕು. ಮುಂದೆ ಅಂತಹ ದೂರು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಲಾಯಿತು.

ಬಂಟ್ವಾಳ ಬಡ್ಡಕಟ್ಟೆ ವಾಣಿಜ್ಯ ಸಂಕೀರ್ಣ ಸೋರುತ್ತಿದ್ದು, ಮಳೆಗಾಲದಲ್ಲಿ ನೀರು ಒಳಗೆ ಬಂದು ಸಾಮಾಗ್ರಿಗಳಿಗೆ ಹಾನಿಯಾಗುತ್ತಿದೆ. ಹೀಗಾಗಿ ಕಟ್ಟಡ ದುರಸ್ತಿ ಮಾಡಿ ಸೋರುವ ಸಮಸ್ಯೆ ಸರಿಪಡಿಸುವಂತೆ ವರ್ತಕರು, ಅಧ್ಯಕ್ಷರು, ಅಧಿಕಾರಿಗೆ ಮನವಿ ಮಾಡಿದರು. ವಾಣಿಜ್ಯ ಸಂಕೀರ್ಣಗಳ ದುರಸ್ತಿ ದೃಷ್ಟಿಯಿಂದ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಮಳೆಗಾಲಕ್ಕೆ ಮುನ್ನಾ ದುರಸ್ತಿಪಡಿಸುವುದಾಗಿ ಭರವಸೆ ನೀಡಿದರು.

ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಪರಿಸರ ಇಂಜಿನಿಯರ್ ರತ್ನಪ್ರಸಾದ್ ಹೆಗ್ಡೆ, ಸಮುದಾಯ ಸಂಘಟಕಿ ಉಮಾವತಿ, ಸಿಬ್ಬಂದಿ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.