ಜಿಲ್ಲೆ

ದೀಪಾವಳಿ ಹಬ್ಬ, ಮಣ್ಣಿನ ಹಣತೆಗಳ ವಹಿವಾಟಿನ ನಿರೀಕ್ಷೆಯಲ್ಲಿ ವರ್ತಕರು

ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಮಣ್ಣಿನ ಹಣತೆಗಳನ್ನು ಮಾರಿ, ಲಾಭವನ್ನು ಗಳಿಸುವ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.
ಹೌದು! ವ್ಯಾಪಕವಾಗಿ ವಿಶೇಷ ಕಾರ್ಯಕ್ರಮಗಳಿಗೆ ವಿದ್ಯುದೀಪಾಲಂಕಾರಗಳ ವ್ಯವಸ್ಥೆಯ ಪೈಪೋಟಿ ಇರುತ್ತದೆ. ಇದರ ನಡುವೆ ಬೆಳಕಿನ ಹಬ್ಬ ಆಚರಣೆಯ ಸಂದರ್ಭದಲ್ಲಿ ಎಣ್ಣೆಯ ಮಣ್ಣಿನ ದೀಪಗಳನ್ನು ಬೆಳಗಿಸುವಂತಹುದರ ಮೇಲೆ ಒಲವು ಹೆಚ್ಚಾಗಿರುತ್ತದೆ. ಇದಕ್ಕೆ ಕುಂಬಾರರು ವಿವಿಧ ಗಾತ್ರ, ಆಕರ್ಷಕ ವಿನ್ಯಾಸದ ದೀಪಗಳನ್ನು ತಯಾರಿಸಿ, ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ.

*ನಿರ್ವಹಣೆ ವೆಚ್ಚ ಹೆಚ್ಚಳ*
ಪ್ಲಾಸ್ಟಿಕ್‌, ಫೈಬರ್‌ ನಲ್ಲಿ ಪರಿಕರಗಳ ತಯಾರಿಕೆಯು ಸರಳ ಹಾಗೂ ಕಡಿಮೆ ವೆಚ್ಚದಾಯಕ. ಇದರ ನಡುವೆ ಮಣ್ಣಿನಿಂದ ತಯಾರದವುಗಳ ಸಹಜವಾಗಿ ಹೆಚ್ಚಾಗಿರುತ್ತದೆ. ನಿರ್ವಹಣೆಯ ವೆಚ್ಚವು ದುಬಾರಿ. ಇದನ್ನು ನಿಭಾಯಿಸಿಕೊಂಡು ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದ್ದರೂ ನಿರೀಕ್ಷೆಗೆ ಅನುಗುಣವಾಗಿ ಲಾಭ ಮಾತ್ರ ಸಿಗುತ್ತಿಲ್ಲ. ಇದಕ್ಕೆ ಹಿಂದಿನ ವರ್ಷಗಳಿಗೆ ಹೋಲಿಸಿದ್ದಲ್ಲಿ ವಹಿವಾಟಿನ ಪ್ರಮಾಣವು ಕಡಿಮೆಯಾಗುತ್ತಿದೆ. ಹಲವರು ಬೇರೆ ಕೆಲಸಗಳ ಮೊರೆ ಹೋಗಿದ್ದಾರೆ. ಆದರೆ, ತಲೆತಲಾಂತರಗಳಿಂದ ಮನೆತನದಲ್ಲಿ ನಡೆದುಕೊಂಡು ಬರುವ ಕಾಯಕವನ್ನು ಕೆಲ ಕುಟುಂಬಸ್ಥರು ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

*ಹಲವು ದಿನಗಳ ಶ್ರಮ*
ಕುಂಬಾರಿಕೆಯು ಹಲವು ದಿನಗಳ ಪರಿಶ್ರಮದ ವೃತ್ತಿಗಳ ಪೈಕಿ ಒಂದು. ಕೆರೆಯಂಗಳ, ಫಲವತ್ತತೆಯ ಮೈದಾನ ಪ್ರದೇಶದಲ್ಲಿ ಜೇಡಿ ಮಣ್ಣನ್ನು ಲೋಡುಗಟ್ಟಲೇ ಹದ ಮಾಡುವುದು, ಕಲ್ಲುಗಳನ್ನು ಪ್ರತ್ಯೇಕಗೊಳಿಸುವುದು, ನೀರಿನಲ್ಲಿ ಮಿಶ್ರಣದೊಂದಿಗೆ ನಯಗೊಳಿಸಿ ಮಡಿಕೆ, ಕುಡಿಕೆ, ದೀಪಗಳು, ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವುದು, ಬಳಿಕ ಬಿಸಿಲಿನಲ್ಲಿ ಒಣಗಿಸುವುದು, ಗಟ್ಟಿಯಾದ ಬಳಿಕ ಅಲಂಕಾರಿಕ ಸ್ಪರ್ಶ ನೀಡುವುದು ಸೇರಿದಂತೆ ಹಲವು ಕೆಲಸಗಳನ್ನು ನಿಭಾಯಿಸಬೇಕು. ಹಾಗೆಯೇ ಸುರಕ್ಷಿತವಾಗಿ ಮಾರುಕಟ್ಟೆಗೆ ಸಾಗಿಸಬೇಕು. ಇದೇ ವೇಳೆ ಹೊಡೆದು ಹೋಗುವುದು, ಬಿರುಕು ಜತೆಗೆ ನಾನಾ ಕಾರಣಗಳಿಂದ ನಷ್ಟ ಉಂಟಾಗುತ್ತದೆ. ಇನ್ನು ನಿರಂತರ ಈ ಕಾಯಕಕ್ಕೆ ನುರಿತ ಕೂಲಿ ಕಾರ್ಮಿಕರೇ ಬೇಕು. ಇದೆಲ್ಲವನ್ನೂ ನಿಭಾಯಿಸಿಕೊಂಡು ಕುಂಬಾರರು ಜೀವನ ಸಾಗಿಸುತ್ತಿದ್ದಾರೆ.

*ಮಣ್ಣಿನ ದೀಪಗಳನ್ನು ಬೆಳಗಿಸಿ*
ಪರಿಸರಕ್ಕೆ ಮಾರಕವಾದ ಪಟಾಕಿ ಹೊಡೆಯುವುದನ್ನು ಬಿಟ್ಟು ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದಾಗ ಸಾರ್ಥಕತೆ ಬರುತ್ತದೆ ಎನ್ನುವುದು ಪರಿಸರ ಪ್ರೇಮಿಗಳ ಮಾತು.    
ಪ್ರತಿ ವರ್ಷ ದೀಪಾವಳಿ ಹಬ್ಬದ ದಿನದಿಂದ ಹಿಡಿದು ಕಾರ್ತಿಕ ಮಾಸ, ಮಾಘ ಮಾಸದಲ್ಲಿ ಪುರಾಣ ಪ್ರಸಿದ್ಧ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯ, ಶ್ರೀ ಮರಳು ಸಿದ್ದೇಶ್ವರ ದೇವಾಲಯ, ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇಗುಲದಲ್ಲಿ ಮದುವೆ, ಸಂತಾನ ಭಾಗ್ಯಕ್ಕೆ ಪ್ರಾರ್ಥಿಸಿ, ಮಣ್ಣಿನ ಹಣತೆಗಳನ್ನು ಬೆಳಗಲಾಗುತ್ತದೆ. ಮಹಿಳೆಯರು ಎಡೆಯಲ್ಲಿ ಅಕ್ಕಿ, ಬೆಲ್ಲ ಹಾಕಿ ಪೂಜಿಸುತ್ತಾರೆ. ಪ್ರತಿ ವರ್ಷ ಮಕರ ಸಂಕ್ರಾಂತಿಗೆ ಇಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲದಿಂದ ಅಂಬಾರಿ ಹಾಗೂ ಸಾಮೂಹಿಕ ದೀಪಗಳೊಂದಿಗೆ ಮೆರವಣಿಗೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತದೆ. ಹಾಗೆಯೇ ಹಲವು ದೇಗುಲದಲ್ಲಿ ವಿಶೇಷ ದಿನಗಳಲ್ಲಿ ಲಕ್ಷ ದೀಪಗಳ ಬೆಳಕು ಗಮನ ಸೆಳೆಯುತ್ತದೆ. ಇಂತಹ ಸಂಪ್ರದಾಯಿಕ ಚಟುವಟಿಕೆಯು ಕುಂಬಾರರು ಹಾಗೂ ವ್ಯಾಪಾರಸ್ಥರಿಗೆ ಜೀವನ ಬಂಡಿ ಸಾಗಿಸಲು ಸಹಕಾರಿಯಾಗಿದೆ.