ಜಿಲ್ಲೆ

ವ್ಯಾಪಾರಿಗಳಿಗೆ ತರಕಾರಿ, ಹೂ ಮಾರಲು ಸಂಕೀರ್ಣದಲ್ಲಿ ಅವಕಾಶ

Mysuru - Desk - Ravikumar

 ಕೆ.ಆರ್.ನಗರ: ಪಟ್ಟಣದ ವಿವಿಧ ಬಾಗಗಳಲ್ಲಿ ತರಕಾರಿ, ಹೂವು ಮತ್ತು ಹಣ್ಣುಗಳ ವ್ಯಾಪಾರ ಮಾಡುತ್ತಿರುವವರಿಗೆ ಪುರಸಭೆಯಿಂದ ನಿರ್ಮಾಣ ಮಾಡುತ್ತಿರುವ ಕೃಷ್ಣರಾಜ ತರಕಾರಿ ಮಾರುಕಟ್ಟೆಯ ಸಂಕೀರ್ಣದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಡಿ.ಶಿವುನಾಯಕ್ ಹೇಳಿದರು.

ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿಯೊಂದಿಗೆ ನೂತನವಾಗಿ ನಿರ್ಮಾಣ ಮಾಡುತ್ತಿರುವ ಕೃಷ್ಣರಾಜ ತರಕಾರಿ ಮಾರುಕಟ್ಟೆಗೆ ಇತ್ತೀಚೆಗೆ ಬೇಟಿ ನೀಡಿ ಸಂಕೀರ್ಣ ಪರಿಶೀಲಿಸಿ ಮಾತನಾಡಿದ ಅವರು ಹಳೆಯ ತರಕಾರಿ ಸಂಕೀರ್ಣದಲ್ಲಿ 50 ಮಂದಿಗೆ ಮತ್ತು ಹೊಸ ಸಂಕೀರ್ಣದಲ್ಲಿ 50 ಮಂದಿ ವ್ಯಾಪಾರ ಮಾಡಲು ಅವಕಾಶವಿದೆ. ಇವುಗಳನ್ನು ಆದ್ಯತೆಯ ಮೇರೆಗೆ ನಿಗದಿಪಡಿಸಲಾಗುತ್ತದೆ ಎಂದರು.

ಈಗಾಗಲೇ ಪಟ್ಟಣದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವವರಿಗೆ ಮೊದಲ ಆದ್ಯತೆ ನೀಡಲಿದ್ದು, ಮಾರುಕಟ್ಟೆಯಲ್ಲಿ ತರಕಾರಿ, ಹೂವು ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಜಾಗವನ್ನು ವಾರ್ಷಿಕ ಹರಾಜು ಮಾಡಿದ ನಂತರ ಲಾಟರಿ ಮೂಲಕ ವ್ಯಾಪಾರಿಗಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹಳೆ ತರಕಾರಿ ಸಂಕೀರ್ಣದ ಜತೆಗೆ ಹೊಸ ತರಕಾರಿ ಸಂಕೀರ್ಣ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಅವರು ಅನುದಾನ ನೀಡಿದ್ದು, ಇದರ ಜತೆಗೆ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಕೊಡಿಸಿ ಜನಪರವಾದ ಕೆಲಸ ಮಾಡಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಅವರನ್ನು ಕೋರಿದ್ದೇವೆ ಎಂದು ಹೇಳಿದರು.

ತರಕಾರಿ ಸಂರ್ಕೀಣಕ್ಕೆ ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವುದರಿಂದ ಬಜಾರ್ ರಸ್ತೆ, ಪುರಸಭೆ ವೃತ್ತ, ಗರುಡಗಂಬದ ವೃತ್ತ ಸೇರಿದಂತೆ ಇತರ ಬಾಗಗಳಲ್ಲಿ ವ್ಯಾಪಾರ ಮಾಡುವವರಿಗೆ ಅನುಕೂಲವಾಗಲಿದೆ. ಇದರ ಜತೆಗೆ ಸಂಚಾರ ವ್ಯವಸ್ಥೆಯು ಉತ್ತಮವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕೆಲಸ ಮಾಡಿದ ನಂತರ ಪುರಸಭೆ ವೃತ್ತವನ್ನು ಆಧುನೀಕರಣ ಮಾಡಿ ಅಲ್ಲಿ ಕಾವೇರಿ ಮಾತೆಯ ಪ್ರತಿಮೆ ಸ್ಥಾಪನೆ ಮಾಡಲು ತೀರ್ಮಾನಿಸಿದ್ದು, ಶೀಘ್ರದಲ್ಲಿಯೆ ಕಾಮಗಾರಿ ಆರಂಭಿಸಲಾಗುವುದು. ಬಯಲು ರಂಗ ಮಂದಿರದ ಆವರಣವನ್ನು ಸಮತಟ್ಟು ಮಾಡಿ ಅಲ್ಲಿಯೂ ಸಾರ್ವಜನಿಕರಿಗೆ ಅನುಕೂವಾಗುವ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ವ ಭರವಸೆ ನೀಡಿದರು.

ಪುರಸಭೆ ಸದಸ್ಯರಾದ ನಟರಾಜು, ಸಿ.ಶಂಕರ್, ಮಾಜಿ ಸದಸ್ಯ ಕೆ.ವಿನಯ್, ಮುಖಂಡರಾದ ಆದರ್ಶ, ನವೀದ್, ಪುರಸಭೆ ಕಂದಾಯ ಅಧಿಕಾರಿ ರಮೇಶ್ ಮತ್ತಿತರರು ಇದ್ದರು.