ಜಿಲ್ಲೆ

ಬಿಬಿಎಂಪಿಯಲ್ಲಿ 455 ಟ್ರೇಡ್ ಲೈಸೆನ್ಸ್ ಅರ್ಜಿಗಳು ಬಾಕಿ : ವಿಲೇಗೆ ಅಧಿಕಾರಿಗಳು ನಿರ್ಲಕ್ಷ್ಯ

ಹರೀಶ್​​ ಕೆ.ಸಿ.

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ವಾಣಿಜ್ಯ ಚಟುವಟಿಕೆ ಆರಂಭಿಸಲು ಪರವಾನಗಿ ಕೋರಿ ಸಲ್ಲಿಸಲಾಗಿದ್ದ 455 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.

ಆರ್.ಆರ್.ನಗರದಲ್ಲಿ ಅತಿ ಹೆಚ್ಚು 101 ಅರ್ಜಿಗಳು ಬಾಕಿ ಉಳಿದರೆ, ಯಲಹಂಕದಲ್ಲಿ 55 ಹಾಗೂ ಸಿ.ವಿ.ರಾಮನ್ ನಗರದಲ್ಲಿ 54 ಅರ್ಜಿಗಳು ವಿಲೇವಾಗಿಲ್ಲ. ಪಾಲಿಕೆಯ ಆರೋಗ್ಯ ವಿಭಾಗದಿಂದ ಇವುಗಳನ್ನು ವಿಲೇವಾರಿ ಮಾಡದೆ ಕಾಲಹರಣ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಕೆಲ ಅಧಿಕಾರಿಗಳು ಕಮಿಷನ್ ನೀಡದಿದ್ದರೆ ಬೇಕೆಂತಲ್ಲೇ ಅರ್ಜಿಗಳನ್ನು ವಿಲೇ ಮಾಡುತ್ತಿಲ್ಲ ಎಂಬುದರ ಬಗ್ಗೆಯೂ ದೂರುಗಳಿವೆ. ನಗರದಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಲು ಪಾಲಿಕೆಯಿಂದ ಇಂತಿಷ್ಟು ಶುಲ್ಕ ಪಾವತಿಸಿ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ಪರವನಾಗಿ ಇಲ್ಲದೆ ಹೊಸ ಅಂಗಡಿ ತೆರೆಯುವಂತಿಲ್ಲ. ಹೀಗಾಗಿ, ಅಂಗಡಿ ಆರಂಭಿಸಲು ಪರವಾನಗಿ ಪಡೆಯಬೇಕೆಂದು ನಿಯಮ ರೂಪಿಸಲಾಗಿದೆ.

ಆಯಾ ಪ್ರದೇಶದ ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೆ,ಪಾಲಿಕೆಯ ವೆಬ್‌ಸೈಟ್‌ನಲ್ಲಿಯೂ ಪರವಾನಗಿ ಕೋರಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಹೆಸರು, ಯಾವ ವಿಧದ ವ್ಯಾಪಾರ, ಅಂಗಡಿ ತೆರೆಯುವ ವಿವರ ಸಹಿತ ಇತರ ಮಾಹಿತಿಗಳನ್ನು ಅರ್ಜಿಯಲ್ಲಿ ನಮೂದಿಸಿ ಸಲ್ಲಿಸಬೇಕು. ನಂತರ, ನಿಗದಿತ ಕಾಲಮಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇಂತಿಷ್ಟು ಶುಲ್ಕ ಕಟ್ಟಿಸಿಕೊಂಡು ಅರ್ಜಿಗಳನ್ನು ವಿಲೇ ಮಾಡಬೇಕು. ಆದರೆ, ನಗರದಲ್ಲಿ ಹಲವು ದಿನಗಳಿಂದ ಬಾಕಿ ಉಳಿದಿದ್ದ 455 ಅರ್ಜಿಗಳನ್ನು ವಿಲೇ ಮಾಡಿಲ್ಲ. ಯಶವಂತಪುರ 29, ಶಿವಾಜಿನಗರ ಮತ್ತು ವಿಜಯನಗರ ತಲಾ 23, ಬಸವನಗುಡಿ 20, ಗೋವಿಂದರಾಜನಗರ 17, ಜಯನಗರ 14, ಸರ್ವಜ್ಞನಗರ 17, ಹೆಬ್ಬಾಳ 16, ಗಾಂಧಿನಗರ 15, ಚಿಕ್ಕಪೇಟೆ 14, ದಾಸರಹಳ್ಳಿ 10, ಕೆ.ಆರ್.ಪುರ 9, ಬಿಟಿಎಂಲೇಔಟ್ ಮತ್ತು ಪುಲಿಕೇಶಿನಗರ ತಲಾ 6 ಅರ್ಜಿಗಳು ಬಾಕಿ ಉಳಿದಿವೆ.

ಅರ್ಜಿಗಳು ವಿಲೇಗೆ ಉದಾಸೀನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾವ ಕಾರಣಕ್ಕಾಗಿ ಅರ್ಜಿಗಳನ್ನು ವಿಲೇ ಮಾಡದೆ ಹಾಗೇ ಬಿಡಲಾಗಿದೆ. ಇದರ ಬಗ್ಗೆ ಪಾಲಿಕೆ ಆಯುಕ್ತರು ವಿಶೇಷ ಗಮನಹರಿಸಬೇಕು. ನಿಗದಿತ ಸಮಯದಲ್ಲಿ ಅರ್ಜಿಗಳನ್ನು ವಿಲೇ ಮಾಡದಿರೆ ಅಂಗಡಿ ತೆರೆಯಲು ಅನುಕೂಲವಾಗಲಿದೆ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಕಮಿಷನ್ ನಿಗದಿ: ಪ್ರತಿ ಟ್ರೇಡ್ ಲೈಸೆನ್ಸ್ ಮಾಡಿಸಿಕೊಡುವುದಕ್ಕೆ ಇಂತಿಷ್ಟು ಕಮಿಷನ್ ನಿಗದಿಪಡಿಸಲಾಗಿದೆ. ಕೆಲವಡೆ ಮಧ್ಯವರ್ತಿಗಳ 10 ಸಾವಿರ ರೂ.ಕಮಿಷನ್ ಪಡೆದು ಪರವಾನಗಿ ಮಾಡಿಕೊಡುತ್ತಾರೆ. ಬಂದ ಕಮಿಷನ್ ಹಣದಲ್ಲಿ ಮಧ್ಯವರ್ತಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಮೂಲಿ ನೀಡುತ್ತಾನೆ. ಕಮಿಷನ್ ಕೊಡದಿದ್ದರೆ ಸಬೂಬು ಹೇಳಿ ಅರ್ಜಿಯನ್ನು ವಿಲೇ ಮಾಡುವುದಿಲ್ಲ. ಹೀಗಾಗಿ, ಅರ್ಜಿದಾರರು, ಅನಿವಾರ್ಯವಾಗಿ ಹಣ ಕೊಟ್ಟು ಪರವಾನಗಿ ಮಾಡಿಸಿಕೊಳ್ಳಬೇಕಿದೆ.