ಬೆಂಗಳೂರು : ಜಮೀನು, ಮನೆ ಮುಂದೆ ನಿಲ್ಲಿಸಿರುವ ಟ್ರ್ಯಾಕ್ಟರ್‌ಗಳನ್ನು ಕದ್ದು ರೈತರಿಗೆ ಬಾಡಿಗೆ ಮತ್ತು ಭೋಗ್ಯಕ್ಕೆ ಕೊಡುತ್ತಿದ್ದ ಕುಖ್ಯಾತ ಕಳ್ಳನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಜಿ.ಕೆಬ್ಬೆಳ್ಳಿ ನಿವಾಸಿ ಬೋರೇಗೌಡ(48) ಬಂಧಿತ. ಆರೋಪಿಯಿಂದ 55 ಲಕ್ಷ ರೂ. ಮೌಲ್ಯದ 12 ಟ್ರ್ಯಾಕ್ಟರ್ ಜಪ್ತಿ ಮಾಡಲಾಗಿದೆ. ಈತನ ಸಹಚರ ಆನಂದ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಮೂಲದ ಬೋರೇಗೌಡ ಮತ್ತು ಆನಂದ್ ಓಮಿನ್ನಿ ಕಾರಿನಲ್ಲಿ ಎಲ್ಲೆಡೆ ಸುತ್ತಾಡುತ್ತಿದ್ದರು. ತೋಟದಲ್ಲಿ, ಜಮೀನು, ರಸ್ತೆಬದಿ ಅಥವಾ ಮನೆ ಮುಂದೆ ನಿಲ್ಲಿಸಿರುವ ಟ್ರ್ಯಾಕ್ಟರ್‌ಗಳನ್ನು ಪತ್ತೆಹಚ್ಚಿ ಮಾಲೀಕರು ಮತ್ತು ಚಾಲಕರ ಮೇಲೆ ನಿಗಾವಹಿಸುತ್ತಿದ್ದರು. ಯಾರು ಇಲ್ಲದೆ ಇದ್ದಾಗ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಮಂಡ್ಯ ತಲುಪುತ್ತಿದ್ದರು. ಸುತ್ತಮುತ್ತಲ ರೈತರು ಅಥವಾ ಚಾಲಕರನ್ನು ಸಂಪರ್ಕ ಮಾಡಿ ಟ್ರ್ಯಾಕ್ಟರ್‌ನ್ನು ಬಾಡಿಗೆ ಅಥವಾ ಭೋಗ್ಯಕ್ಕೆ ಕೊಡುವುದಾಗಿ ಹೇಳುತ್ತಿದ್ದರು.
ಕಾರಣ ಕೇಳಿದರೆ ಅನಾರೋಗ್ಯ, ಚಾಲಕನಿಗೆ ವೇತನ ಕೊಡಲು ಸಾಧ್ಯವಿಲ್ಲ, ಬೇರೆ ನೆಪದಲ್ಲಿ ತಿಂಗಳಿಗೆ 5 ಸಾವಿರರಿಂದ 15 ಸಾವಿರ ವರೆಗೂ ಬಾಡಿಗೆ ಅಥವಾ ಭೋಗ್ಯಕ್ಕೆ ಕೊಡುತ್ತಿದ್ದರು. ಪ್ರತಿ ತಿಂಗಳು ಹೋಗಿ ಹಣ ಸ್ವೀಕರಿಸುತ್ತಿದ್ದರು. ಇತ್ತ ರೈತರು ಕಡಿಮೆ ಬಾಡಿಗೆಗೆ ದೊರೆಯಿತು ಎಂದು ಕದ್ದ ಟ್ರ್ಯಾಕ್ಟರ್ ಸ್ವೀಕರಿಸುತ್ತಿದ್ದರು.
ಕೆಲ ಟ್ರ್ಯಾಕ್ಟರ್‌ಗಳನ್ನು 2 ರಿಂದ 3 ಲಕ್ಷ ರೂ.ಗೆ ಮಾರಾಟ ಮಾಡಿರುವುದು ಸಹ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೇ ರೀತಿ ಅ.18ರಂದು ಅನಾರೋಗ್ಯ ಕಾರಣ ಟ್ರ್ಯಾಕ್ಟರ್‌ನ್ನು ಸುಂಕದಕಟ್ಟೆ ಸಮೀಪದ ಹೊಯ್ಸಳನಗರ ಪಾರ್ಕ್ ಹತ್ತಿರ ನಿಲ್ಲಿಸಿ ಹುಲಿಯೂರು ದುರ್ಗಗೆ ಹೋಗಿದ್ದ.
ಇತ್ತ ಒಮಿನ್ನಿ ಕಾರಿನಲ್ಲಿ ಬಂದ ಆನಂದ್ ಮತ್ತು ಬೋರೇಗೌಡ, ವಾರಸುದಾರರು ಇಲ್ಲದೆ ನಿಂತಿದ್ದ ಟ್ರ್ಯಾಕ್ಟರ್ ನೋಡಿ ಕಳವು ಮಾಡಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದರು.
ಕೆಲದಿನಗಳು ಬಿಟ್ಟು ಚಾಲಕ ಲೋಕೇಶ್ ಬಂದು ನೋಡಿದಾಗ ಟ್ರ್ಯಾಕ್ಟರ್ ಕಳವಾಗಿತ್ತು. ಈತ ಕೊಟ್ಟ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಅಕ್ಕಪಕ್ಕದ ಸಿಸಿ ಕ್ಯಾಮರಾದಲ್ಲಿ ಒಮ್ನಿ ಕಾರಿನ ನಂಬರ್ ಮತ್ತು ಆರೋಪಿಗಳ ಮುಖ ಚಹರೆ ಪತ್ತೆಯಾಗಿತ್ತು. ಈ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಬೋರೇಗೌಡನನ್ನು ಬಂಧಿಸಲಾಗಿದೆ. ಆನಂದ್ ತಲೆಮರೆಸಿಕೊಂಡಿದ್ದು, ಈತನ ಬಂಧನದ ಬಳಿಕ ಮತ್ತಷ್ಟು ಪ್ರಕರಣಗಳು ಪತ್ತೆಯಾಗಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.