ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ 4 ದಿನಗಳ ಮೊದಲ ದಿನವಾದ ಶನಿವಾರ ದುರಂತ ನಡೆದಿದೆ. ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ತರಲಾಗಿದ್ದ ಮಿನಿ ಟ್ರ‍್ಯಾಕ್ಟರ್ ಬಿದ್ದು ಚಾಲಕ ಮೃತಪಟ್ಟಿದ್ದಾನೆ.
ತುಮಕೂರು ಮೂಲದ ಪರಶುರಾಮ ಆರ್. (32) ಮೃತ ವ್ಯಕ್ತಿ. ಕಂಪನಿಯೊ0ದರ ಮಿನಿ ಟ್ರ‍್ಯಾಕ್ಟರ್‌ಗಳನ್ನು ಬೃಹತ್ ಟ್ರಕ್‌ನಲ್ಲಿ ತರಲಾಗಿತ್ತು. ಬೆಳಗ್ಗೆ 7.30ರ ಸುಮಾರಿಗೆ ಟ್ರ‍್ಯಾಕ್ಟರ್‌ಗಳನ್ನು ಕೆಳಗೆ ಇಳಿಸುತ್ತಿದ್ದ ವೇಳೆ ಪಲ್ಟಿಯಾಗಿ ಪರಶುರಾಮನ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟು ತಗುಲಿ ಪರಶುರಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
* ಸಮತಾ ಸೇನೆಯಿಂದ ಪ್ರತಿಭಟನೆ:
ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಹು- ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಮೃತದೇಹ ಸ್ಥಳಾಂತರಕ್ಕೆ ಮುಂದಾದಾಗ ಸಮತಾ ಸೇನೆ ಪ್ರತಿಭಟನೆಗಿಳಿದರು. ಮಳೆಯಾಗಿದ್ದರಿಂದ ಪ್ರದರ್ಶನ ಮಳಿಗೆ ಆವರಣ ಸಂಪೂರ್ಣ ಕೆಸರುಮಯವಾಗಿತ್ತು. ಟ್ರ‍್ಯಾಕ್ಟರ್ ಇಳಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಚಾಲಕನ ಮೇಲೆ ಬಿದ್ದಿದೆ. ಮೃತನ ಕುಟುಂಬದವರಿಗೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಅವಲಂಬಿತರೊಬ್ಬರಿಗೆ ಕಾಯಂ ನೌಕರಿ ನೀಡಬೇಕು ಎಂದು ಪಟ್ಟು ಹಿಡಿದರು. ಕುಲಪತಿ ಡಾ. ಪಾಟೀಲ ಮೃತನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ.
* ಕೃಷಿ ವಿವಿಯಿಂದ 5 ಲಕ್ಷ ರೂ. ಚೆಕ್ ವಿತರಣೆ:
ಪರಿಹಾರ ಘೋಷಿಸಿ ಚೆಕ್ ವಿತರಿಸುವವರೆಗೆ ಮೃತದೇಹ ಹೊರತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕುಲಪತಿ ಹಾಗೂ ಆಡಳಿತ ಮಂಡಳಿಯವರು ಚರ್ಚಿಸಿ 5 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿದರು. ಸಂಜೆ 4 ಗಂಟೆ ಸುಮಾರಿಗೆ ಮೃತನ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತುಮಕೂರಿಗೆ ಮೃತದೇಹ ರವಾನಿಸಲಾಯಿತು.