ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿಯ ಸೊನಾಲಿಮ್ ಮತ್ತು ದೂಧಸಾಗರ ನಿಲ್ದಾಣ ಮಧ್ಯದ ಬ್ರಗಾಂಜಾ ಘಾಟ್ನಲ್ಲಿ ಹಳಿ ತಪ್ಪಿದ್ದ ಗೂಡ್ಸ್ ರೈಲಿನ ಎಲ್ಲ 17 ಬೋಗಿಗಳನ್ನು ಸೋಮವಾರ ಸಂಜೆ ಹೊತ್ತಿಗೆ ಮರಳಿ ಹಳಿ ಮೇಲೆ ಇರಿಸಲಾಗಿದೆ.
ಆ. 9ರ ಬೆಳಗ್ಗೆ ಸುಮಾರು 9.35ಕ್ಕೆ ಗೂಡ್ಸ್ ರೈಲಿನ 17 ಬೋಗಿಗಳು ಹಳಿ ತಪ್ಪಿದ್ದವು. ಘಟನಾ ಸ್ಥಳಕ್ಕೆ ತಲುಪಿದ ರೈಲ್ವೆ ಸಿಬ್ಬಂದಿ, ಹಲವಾರು ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಎಲ್ಲ ಬೋಗಿಗಳನ್ನು ಮರಳಿ ಹಳಿ ಮೇಲೆ ಇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ರೈಲ್ವೆ ಹಳಿಯೂ ಮೊದಲಿನಂತೆ ಸಿದ್ಧಗೊಂಡಿದೆ. ಸಿದ್ದಗೊಂಡ ಹಳಿಯ ಮೇಲೆ ಮೊದಲ ಬಾರಿಗೆ ಸಂಚರಿಸಿದ ರೈಲು, ಪ್ರತಿ ಗಂಟೆಗೆ 10 ಕಿಮೀ ವೇಗದಲ್ಲಿ ಚಲಿಸಿತು. ಇದೀಗ ಪ್ರತಿ ಗಂಟೆಗೆ 20 ಕಿಮೀ ವೇಗದಲ್ಲಿ ಸಂಚರಿಸುವಂತೆ ಹಳಿ ಸಿದ್ದಗೊಂಡಿದೆ.
ಸಧ್ಯಕ್ಕೆ ಕೇವಲ ಗೂಡ್ಸ್ ರೈಲುಗಳಿಗೆ 20 ಕಿಮೀ ವೇಗದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ನಂತರ ಪ್ರಯಾಣಿಕರ ರೈಲುಗಳ ಸಂಚಾರಕ್ಕೂ ಅನುಮತಿ ನೀಡಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಮೂಲಗಳು ತಿಳಿಸಿವೆ.
ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಎಜಿಎಂ ಕೆ.ಎಸ್. ಜೈನ್, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಹರ್ಷ ಖರೆ ಹಾಗೂ ಇತರ ಹಿರಿಯ ಅಧಿಕಾರಿಗಳು, ರೈಲ್ವೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.