ತಿಪಟೂರು : ನಗರಸಭೆಯ ಸಾಮಾನ್ಯ ಸಭೆಯಲ್ಲಿ 2021-22ನೇ ಸಾಲಿನ ನಗರಸಭೆ ನಿಧಿ ಶೇ.7.25 ಮತ್ತು ಶೇ.6.95 ಅನುದಾನದಲ್ಲಿ 11.70 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿತ್ತು. ಆದರೆ, ಸಭೆಯ ಗಮನಕ್ಕೆ ತರದೆ ಅಧಿಕಾರಿಗಳು ಈ ಮೊತ್ತವನ್ನು ದಿಢೀರನೆ 10.55 ಲಕ್ಷ ರೂ.ಗೆ ಪರಿಷ್ಕರಿಸಿ, ಟೆಂಡರ್ ಆಹ್ವಾನಿಸಿದ್ದಾರೆ ಎಂದು ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಟಿ.ಎನ್. ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಿರಣ್ ನೇತೃತ್ವದಲ್ಲಿ ಶುಕ್ರವಾರ ಏರ್ಪಾಡಾಗಿದ್ದ ಮೊದಲ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಅನುಮೋದಿತ ಕಾಮಗಾರಿಗಳ ಮೊತ್ತವನ್ನು ಇಳಿಸಲು ಅಧಿಕಾರ ಕೊಟ್ಟವರು ಯಾರು ಎಂದು ಟಿ.ಎನ್. ಪ್ರಕಾಶ್ ಪ್ರಶ್ನಿಸಿದಾಗ ಅಧಿಕಾರಿಗಳು ಮೌನಕ್ಕೆ ಶರಣಾದರು. ಇದು ಸ್ಥಾಯಿ ಸಮಿತಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು.
ಆಗಿದ್ದಾದರೂ ಏನು? : ನಗರಸಭೆ ನಿಧಿ ಶೇ.7.25 ಮತ್ತು ಶೇ.6.95 ಅನುದಾನದಲ್ಲಿ 11.70 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ ನಂ.2ರ ಸುಣ್ಣದ ಬೀದಿ, ಬಳೆಗಾರ್ ಬೀದಿ, ಹೆಗ್ಗಡಿಗರ ಬೀದಿಯಲ್ಲಿ ಎರಡು ಬದಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.17ರ ತ್ರಿಮೂರ್ತಿ ಟಾಕೀಸ್ ಹಿಂಭಾಗದಲ್ಲಿ ಬಡ ಜನರು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.24ರ ಗುರಪ್ಪನಕಟ್ಟೆ ಮತ್ತು ಇತರ ಬಡ ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ ಚರಂಡಿ ನಿರ್ಮಾಣ ಹಾಗೂ ಕಲ್ವರ್ಟ್ ಅಳವಡಿಕೆ (ವರ್ಕ್ ಇಂಡೆಂಟ್ ಸಂ.123890) ಕೈಗೊಳ್ಳಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಅನುಮೋದನೆ ನೀಡಿದ್ದರು.
ಆದರೆ, ಈ ಮೊತ್ತವನ್ನು ಅಧಿಕಾರಿಗಳು 10.55 ಲಕ್ಷ ರೂ.ಗೆ ಇಳಿಸಿ ಟೆಂಡರ್ ಆಹ್ವಾನಿಸಿದ್ದರು. ಸಲ್ಲಿಕೆಯಾಗಿರುವ ಟೆಂಡರ್‌ಗಳನ್ನು ತೆರೆದು ಅನುಮೋದನೆ ನೀಡಲು ನಗರಸಭೆ ಸ್ಥಾಯಿ ಸಮಿತಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅಧಿಕಾರಿಗಳ ನಡವಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.
ಮರುಸರ್ವೇ ನಡೆಸಲು ಆಗ್ರಹ: ಎಲ್ಲ ಜನಾಂಗದವರಿಗೂ ಸವಲತ್ತುಗಳು ತಲುಪುವಂತೆ ಆಗಲಿ ಎಂಬುದು ನಗರಸಭೆ ನಿಧಿ ಶೇ.7.25 ಮತ್ತು ಶೇ.6.95 ಅನುದಾನದ ಉದ್ದೇಶವಾಗಿದೆ. ಆದರೆ, ಈ ಕಾಮಗಾರಿಗಳಲ್ಲಿ ನಾಯಕ ಜನಾಂಗದವರನ್ನು ನಿರ್ಲಕ್ಷಿಸಲಾಗಿದೆ. ನಿಮ್ಮ ಈ ಕ್ರಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳನ್ನು ತಲುಪಿಸಬೇಕು ಎಂಬ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಯಾವ ಆಧಾರದಲ್ಲಿ ಜಾತಿ, ಸಮಾಜದ ಸಮೀಕ್ಷೆ ಕೈಗೊಂಡಿದ್ದೀರಿ? ಯಾವ ಆಧಾರದಲ್ಲಿ ಕಾಮಗಾರಿ ಕೈಗೊಳ್ಳುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುವಂತೆ ಅಧಿಕಾರಿಗಳನ್ನು ಟಿ.ಎನ್. ಪ್ರಕಾಶ್ ಆಗ್ರಹಿಸಿದರು. ಅಲ್ಲದೆ, ಇನ್ನೂ ಕಾಲ ಮಿಂಚಿಲ್ಲವಾದ್ದರಿಂದ, ಮರುಸರ್ವೇ ನಡೆಸಿ, ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಿಸಿ ಸೂಚನೆ ಮೇರೆಗೆ ಕಡಿತ: ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ಅನುಮೋದಿತ ಕಾಮಗಾರಿಗಳ ಮೊತ್ತವನ್ನು ಶೇ.20 ಎಂದರೆ, 11.70 ಲಕ್ಷ ರೂ.ನಿಂದ 10.55 ಲಕ್ಷ ರೂ.ಗೆ ಇಳಿಸಲಾಗಿದೆ ಎಂದು ನಗರಸಭೆ ಆಯುಕ್ತ ಉಮಾಕಾಂತ್ ಸಮಜಾಯಿಷಿ ನೀಡಿದರು. ಆದರೆ, ಈ ಸ್ಪಷ್ಟನೆಯನ್ನು ಒಪ್ಪದ ಟಿ.ಎನ್. ಪ್ರಕಾಶ್, ಜಿಲ್ಲಾಧಿಕಾರಿ ಅವರಂತೆ ನಗರಸಭೆ ಸದಸ್ಯರಿಗೂ ಅಧಿಕಾರ ಪ್ರದತ್ತವಾಗಿದೆ. ಯಾವುದೇ ಸಭೆಯ ನಿರ್ಣಯವನ್ನು ಮೂರು ತಿಂಗಳ ಒಳಗಾಗಿ ಪರಿಷ್ಕರಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ, ಮೊತ್ತವನ್ನು ಪರಿಷ್ಕರಿಸುವ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಿಲ್ಲ ಏಕೆ ಎಂದು ಕೇಳಿದಾಗ ಆಯುಕ್ತರು ನಿರುತ್ತರರಾದರು. ನಗರಸಭೆ ಅಧ್ಯಕ್ಷ ಪಿ.ಜೆ. ರಾಮಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಸ್ಥಾಯಿ ಸಮಿತಿ ಸದಸ್ಯರಾದ ಮಹೇಶ್. ಹೂರ್ ಬಾನು. ಮೋಹನ್ ಕುಮಾರ್ ಇತರರು ಇದ್ದರು.
ಒಂದೇ ವಾರ್ಡ್‌ನಲ್ಲಿ ಎರಡ್ಮೂರು ಇಲಾಖೆಗಳಿಂದ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದಕ್ಕೆ ನಗರಸಭೆಯಿಂದ ನಿರಾಕ್ಷೇಪಣಾ ಪತ್ರ ಕೊಡಲಾಗಿದೆಯೇ? ನೀವು ಮಾಡುವ ತಪ್ಪಿಗೆ ಸದಸ್ಯರನ್ನು ಬಲಿಪಶು ಮಾಡಬೇಡಿ. ಪಿ.ಜೆ. ರಾಮಮೋಹನ್, ಸ್ಥಾಯಿ ಸಮಿತಿ ಪದನಿಮಿತ್ತ ಸದಸ್ಯ