ಕಾರವಾರ TP Meeting: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌ಗಳ ಸುತ್ತ ಸ್ವಚ್ಛತೆ ಕಾಪಾಡಿ ಎಂದು ಕಾರವಾರ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ ಮೇಸ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಮಾಜಾಳಿ ಹಾಗೂ ಇನ್ನೂ ಕೆಲವೆಡೆ ಹಾಸ್ಟೆಲ್‌ಗಳ ಸುತ್ತ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ಅದನ್ನು ಸ್ವಚ್ಛ ಮಾಡಿಸಿ. ಕಿನ್ನರ, ದೇವಮಕ್ಕಿ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಪೂರೈಕೆಗೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. ಹಾಸ್ಟೆಲ್‌ಗಳಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ತಪಾಸಣೆ ನಡೆಸಬೇಕು. ಅದರ ವರದಿಯನ್ನು ಮುಂದಿನ ಸಭೆಯಲ್ಲಿ ಸಲ್ಲಿಸಿ ಎಂದು ಆರೋಗ್ಯಾಧಿಕಾರಿಗಳಿಗೆ ಮೇಸ್ತ ಸೂಚನೆ ನೀಡಿದರು.
ಶಾಲೆಗಳ ಅಕ್ಷರ ದಾಸೋಹ ಬಿಸಿಯೂಟದಲ್ಲಿ ಅಂಗೀಕೃತ ಮೆನುವಿನಂತೆ, ಮೊಟ್ಟೆ, ಹಾಲನ್ನು ನೀಡಬೇಕು. ಕೆಲವು ಕಡೆಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ತೊಂದರೆಯಿದ್ದು ಅದನ್ನು ಸರಿ ಪಡಿಸಿಕೊಳ್ಳುವಂತೆ ಸೂಚಿಸಿದರು. ಪ್ರಯಾಣಿಕರು ಬಸ್ ನಿಲ್ಲಿಸುವಂತೆ ಬಸ್ ನಿಲ್ದಾಣದ ಹೊರಗಡೆ ಕೈ ಅಡ್ಡ ಮಾಡಿದರೂ ವಾಹನ ಚಾಲಕರು ಬಸ್ ನಿಲ್ಲಿಸುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಬಸ್ ಚಾಲಕರು, ಪ್ರಯಾಣಿಕರು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ರೇಷ್ಮೆ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ವಹಿಸಿ ಎಂದು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ತಾಪಂ ಇಒ ವೀರನಗೌಡ ಪಿ.ಏಗನಗೌಡ ಇದ್ದರು.