ಜಿಲ್ಲೆ

ಸಮಸ್ಯೆಗಳ ತ್ವರಿತ ವಿಲೇವಾರಿಗೆ ಸೂಚನೆ

ಶಿವರಾಜ.ಎಂ

ಕುಂದುಕೊರತೆ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ತರಾಟೆ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನಲ್ಲಿ 2013ರಿಂದ ವಿಲೇಯಾಗದ ಸಾಕಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ದಲಿತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಅಧಿನಿಯಮದಡಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕರ ಮೂಲ ಸೌಕರ್ಯ, ರಸ್ತೆ ದುರಸ್ಥಿ ಜತೆಗೆ ಮೇಲ್ದರ್ಜೆಗೇರಿಸುವುದು, ಆಂಬ್ಯುಲೆನ್ಸ್ ಹಾಗೂ ಸರ್ಕಾರಿ ಆಸ್ಪತ್ರೆ ಸಮಸ್ಯೆ, ಹಕ್ಕು ಪತ್ರ ವಿತರಣೆ, ಸಾಗುವಳಿ ಚೀಟಿ ವಿತರಣೆ, ಬಿಎಂಟಿಸಿ ಸಂಚಾರ, ರಸ್ತೆ ಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸ್ಥಳದಲ್ಲೇ ಪರಿಹಾರ ನೀಡಬಹುದಾದ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ಉಳಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದರು.

ಅಧಿಕಾರಿಗಳಿಗೆ ಆದೇಶ
ಖಾತೆ, ಪಹಣಿಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆಯದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಉಪತಹಸೀಲ್ದಾರ್ ಪ್ರಭಾಕರ್ ಅವರಿಗೆ ಸೂಚಿಸಿದರು. ಬಿಎಂಟಿಸಿ ಬಸ್‌ಗಳು ಹೆದ್ದಾರಿಗಳಿಗೆ ಮಾತ್ರ ಸೀಮಿತವಾಗಿದ್ದು, ಮೊದಲಿನಂತೆ ನಗರದ ಹಳೆ ಬಸ್ ನಿಲ್ದಾಣದವರೆಗೆ ಸಂಚರಿಸಬೇಕು. ಈ ನಿಟ್ಟಿನಲ್ಲಿ ಪ್ರಯಾಣಿಕರ ಸಮಸ್ಯೆ ಬಗೆಹರಿಸಬೇಕು ಎಂದು ಬಿಎಂಟಿಸಿ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಲೋಕೊಪಯೋಗಿ ಇಲಾಖೆ ಸುಪರ್ದಿಗೆ ಬರುವ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನೆಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪಘಾತ ವೇಳೆ ಬರುವ ಆಂಬುಲೆನ್ಸ್ ಗಳು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಬಲವಂತವಾಗಿ ಕೊಂಡೊಯ್ಯುತ್ತಿರುವ ಮಾಹಿತಿ ದೊರೆತಿದ್ದು, ಎಲ್ಲ ದಂಧೆಗಳಿಗೆ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ತಾಪಂ ಇಒ ಚಂದ್ರಶೇಖರ್, ಉಪತಹಸೀಲ್ದಾರ್ ಪ್ರಭಾಕರ್, ಹೊಸಕೋಟೆ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಶಂಕರೇಗೌಡ ಅಣ್ಣಪ್ಪ ಸಾಹೇಬ್ ಪಾಟೀಲ್, ನಗರಸಭೆ ಆಯುಕ್ತ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಇದ್ದರು.